(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 04. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮರು ತನಿಖೆಗೆ ಒತ್ತಾಯಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಮೈಸೂರಿನ ಒಡನಾಡಿ ಸಂಸ್ಥೆಯೊಂದು ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟವನ್ನು ಕೈಗಳ್ಳುವುದಾಗಿ ಹೇಳಿದೆ.

ಇದಕ್ಕೆ ಸಂಬಂಧಿಸಿ, ಧರ್ಮಸ್ಥಳ ಪಾಂಗಳ ಎಂಬಲ್ಲಿನ ಸೌಜನ್ಯಾಳ ಮನೆಗೆ ಭೇಟಿ ನೀಡಿದ ಒಡನಾಡಿ ಸಂಸ್ಥೆಯ ಕೆ.ವಿ.ಸ್ಟಾನ್ಲಿ ಹಾಗೂ ಪರಶುರಾಮ್, ಕುಟುಂಬಿಕರು ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಇತರ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ, ನ್ಯಾಯಾಲಯದಲ್ಲಿ ಕಾನೂನು ರೀತಿಯ ಹೋರಾಟಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಬಳಿಕ ಮಾದ್ಯಮದೊಂದಿಗೆ ಮಾತನಾಡಿದ ಸ್ಟಾನ್ಲಿ ಹಾಗೂ ಪರಶುರಾಮ್, ಈ ಪ್ರಕರಣದ ಬಗ್ಗೆ ಹಿಂದಿನಿಂದಲೂ ಗಮನಿಸುತ್ತಾ ಬಂದಿದ್ದೇವೆ. ಇದೀಗ ಸಿಬಿಐ ಆರೋಪಿಯೆಂದು ಬಂಧಿಸಿದ್ದ ಸಂತೋಷ್ ರಾವ್ ನನ್ನು ನ್ಯಾಯಾಲಯವು ಬಿಡುಗಡೆಗೊಳಿಸಿದೆ. ಇದೀಗ ಆರೋಪಿ ಯಾರೆಂದು ಪತ್ತೆ ಕಾರ್ಯ ನಡೆಯಬೇಕಾಗಿದ್ದು, ಅದಕ್ಕಾಗಿ ಪ್ರಕರಣದ ಮರು ತನಿಖೆ ನಡೆಯಬೇಕಿದೆ.

ಸಿಬಿಐಯ ಗೌರವ ಉಳಿಯಬೇಕಾದರೆ ಮರು ತನಿಖೆ ನಡೆದು ಆರೋಪಿ ಯಾರೆಂದು ಪತ್ತೆ ಹಚ್ಚಬೇಕಾಗಿದೆ. ಅದಕ್ಕಾಗಿ ಎಲ್ಲಾ ರೀತಿಯ ಕಾನೂನು ಹೋರಾಟಗಳನ್ನು ತಜ್ಞರ ಸಹಕಾರದಿಂದ ನಡೆಸಲಾಗುವುದು. ಆರೋಪಿಗಳು ಎಷ್ಟೇ ಪ್ರಬಲರಾಗಿರಲಿ, ಅವರನ್ನು ಕಾನೂನಿನ ಮುಂದೆ ತರಬೇಕಾದ ಅಗತ್ಯವಿದೆ. ಸೌಜನ್ಯಳ ತಾಯಿಗೆ ನ್ಯಾಯ ಕೊಡಿಸುವವರೆಗೂ ಹೋರಾಟ
ಮುಂದುವರಿಯಲಿದೆ. ಯಾವುದೇ ಬೇಧಗಳಿಲ್ಲದೇ ಕರ್ನಾಟಕದ ಜನರು ನ್ಯಾಯಕ್ಕಾಗಿ ಈ ಹೋರಾಟವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
