(ನ್ಯೂಸ್ ಕಡಬ) newskadaba.com ಮಂಡ್ಯ, ಜ.26. ಶಾಲೆಯಲ್ಲಿ ಶಿಕ್ಷಕ ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೇ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ನಡೆದಿದ್ದು, ಇದೀಗ ಬಾಲಕಿಯ ಮೃತದೇಹವನ್ನು ಹುಟ್ಟೂರು ಉಪ್ಪಿನಂಗಡಿಗೆ ತರಲಾಗಿದೆ.
ಮೃತ ಬಾಲಕಿಯನ್ನು ಮಂಡ್ಯದ ಕೆ.ಆರ್ ಪೇಟೆಯಲ್ಲಿರುವ ನವೋದಯ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಉಪ್ಪಿನಂಗಡಿ ಮೂಲದ ಜೈಬುನ್ನಿಸಾ (16) ಎಂದು ಗುರುತಿಸಲಾಗಿದೆ. ಈಕೆ ನವೋದಯ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಶಾಲೆಯಲ್ಲಿ ರವಿ ಎಂಬ ಶಿಕ್ಷಕ ಬಾಲಕಿಗೆ ಕೆಲವು ಸಮಯಗಳಿಂದ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯು ಮನೆಯವರೊಂದಿಗೆ ಫೋನ್ ಮುಖಾಂತರ ತಿಳಿಸಿದ್ದಳು. ತನ್ನ ಸಹಪಾಠಿಗಳ ಮುಂದೆಯೇ ಶಿಕ್ಷಕರು ಅಮಾನವೀಯವಾಗಿ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ನೊಂದ ಬಾಲಕಿಯು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಶಾಲೆಯ ದೈಹಿಕ ಶಿಕ್ಷಕನ ವಿರುದ್ಧ ಬಾಲಕಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಪ್ರತಿಭಟನೆಯನ್ನು ನಡೆಸಿದ್ದರು. ಈ ಕುರಿತು ಕೆ.ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗುರುವಾರ ರಾತ್ರಿ ಮೃತದೇಹವನ್ನು ಬಾಲಕಿಯ ತಾಯಿಯ ಹುಟ್ಟೂರು ಉಪ್ಪಿನಂಗಡಿಗೆ ತರಲಾಗಿದೆ.