ಕಳಾರ: ಕಟ್ಟಡದಲ್ಲಿನ ಸಾಮಾಗ್ರಿ ತೆರವುಗೊಳಿಸದೆ ಬೆದರಿಕೆ ► ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜ.26. ಕಡಬ ಗ್ರಾಮದ ಕಳಾರ ನಿವಾಸಿ ಪಿಜಿನರವರ ಸ್ವಂತ ಕಟ್ಟಡದಲ್ಲಿ ಸ್ಥಳೀಯ ನಿವಾಸಿ ಸಯ್ಯದ್ ಹುಸೈನ್ ಎಂಬವರು ಇಟ್ಟಿರುವ ಶಾಮಿಯಾನ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಕೇಳಿಕೊಂಡರು ತೆರವುಗೊಳಿಸದೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕಡಬ ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ) ಸಂಚಾಲಕ ವಸಂತ ಕುಬಲಾಡಿಯವರು ಜಿಲ್ಲಾಧಿಕಾರಿ, ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ.ಗೆ ದೂರು ನೀಡಿದ್ದಾರೆ.

ಕಡಬ ಗ್ರಾಮದ ಕಳಾರ ದಿ.ಕೊರಗ ಮುಗೇರರವರ ಪುತ್ರ ಪಿಜಿನ ಮುಗೇರರವರು ಅವರ ಪಟ್ಟಾ ಸ್ಥಳದ ಸ.ನಂ.16/3ರಲ್ಲಿ ಕೃಷಿ ಸಾಮಾಗ್ರಿಗಳ ಸಂಗ್ರಹಕ್ಕಾಗಿ ಕಟ್ಟಡವನ್ನು ಕಟ್ಟಿಕೊಂಡಿದ್ದು ಈ ಕಟ್ಟಡವು ಖಾಲಿ ಇದ್ದ ಕಾರಣ ಮಾನವೀಯತೆ ನೆಲೆಯಲ್ಲಿ ಸ್ಥಳೀಯ ನಿವಾಸಿ ಸೈಯ್ಯದ್ ಹುಸೇನ್ ಎಂಬವರಿಗೆ ಶಾಮಿಯಾನ ಸಾಮಾಗ್ರಿಗಳನ್ನು ಇಡಲು ಕೊಟ್ಟಿದ್ದರು. ಈಗ ಪಿಜಿನ ಮುಗೇರ ಅವರಿಗೆ ಕಟ್ಟಡದ ಅಗತ್ಯವಿರುವುದರಿಂದ ಕಟ್ಟಡದಿಂದ ಸಾಮಾಗ್ರಿಗಳನ್ನು ತೆರವುಗೊಳಿಸಲು ಹೇಳಿದರೂ ತೆರವುಗೊಳಿಸದೆ ಬೆದರಿಕೆ ಒಡ್ಡುತ್ತಿದ್ದಾರೆ. ಗ್ರಾ.ಪಂ.ನಿಂದ ಈ ಕಟ್ಟಡಕ್ಕೆ ಅಕ್ರಮವಾಗಿ ಕಟ್ಟಡ ನಂ.2-134/1 ನಂಬ್ರ ಸಹ ಕೊಡಲಾಗಿದೆ. ಈ ಬಗ್ಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯವರಲ್ಲಿ ವಿಚಾರಿಸಿದ ವೇಳೆ ಈ ಹಿಂದಿನ ಪಿಡಿಒರವರು ರಾಜಕೀಯ ಒತ್ತಡಕ್ಕೆ ಮಣಿದು ಕಟ್ಟಡ ನಂಬ್ರ ಕೊಟ್ಟಿರಬಹುದು ಎಂಬ ಉತ್ತರ ನೀಡಿದ್ದಾರೆ. ಈ ಬಗ್ಗೆ ಗ್ರಾ.ಪಂ.ಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ಕಟ್ಟಡದಲ್ಲಿ ಇರುವ ಸಾಮಾಗ್ರಿ ತೆರವುಗೊಳಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸದ್ರಿ ಕಟ್ಟಡಕ್ಕೆ ಕಟ್ಟಡ ನಂಬ್ರ ನೀಡಿರುವ ದಾಖಲೆ ಪತ್ರಗಳ ನಕಲು ಪ್ರತಿ ನೀಡುವಂತೆ ಗ್ರಾ.ಪಂ.ಗೆ ಪಿಜಿನ ಮುಗೇರವರು ಮನವಿ ಮಾಡಿದ್ದಾರೆ.

error: Content is protected !!

Join the Group

Join WhatsApp Group