ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ➤ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 04. ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿರುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.

ಈ ಬಾರಿ ಜೂನ್ ನಲ್ಲಿ ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಜುಲೈ ಪ್ರಾರಂಭದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದ್ದು, ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ದಿನದ 24 ಗಂಟೆಯೂ ಸದಾ ಎಚ್ಚರದಿಂದ ಇರಬೇಕು ಎಂದು ಶಾಸಕರು ಸೂಚಿಸಿದ್ದಾರೆ. ಮರಗಳು ಬಿದ್ದು ಹಾನಿಯಾಗುವುದು, ವಿದ್ಯುತ್ ಅವಘಡ ಸೇರಿದಂತೆ ಯಾವುದೇ ಅನಾಹುತ ನಡೆದರೂ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಅನಾಹುತದಿಂದ ಯಾರೇ ಗಾಯಗೊಂಡರೂ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮರ ಬಿದ್ದು ಅಥವಾ ಧರೆ ಜರಿದು ಮನೆಗಳಿಗೆ ಹಾನಿಯಾದರೆ ಆ ಮನೆಗಳ ಕುಟುಂಬಗಳಿಗೆ ವಾಸ್ತವ್ಯ ಮಾಡಲು ಸಾಧ್ಯವಿಲ್ಲದೇ ಹೋದಲ್ಲಿ ಅಥವಾ ವಾಸ್ತವ್ಯವಾಗಲು ಅಪಾಯಕಾರಿ ಸ್ಥಳ ಎಂದು ಗೊತ್ತಾದಲ್ಲಿ ತಕ್ಷಣ ಅವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಬೇಕು. ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿರಬೇಕು. ನಗರಸಭಾ ವ್ಯಾಪ್ತಿಯಲ್ಲಿ ಎಚ್ಚರದಿಂದ ಕಾರ್ಯನಿರ್ವಹಿಸುವಂತೆಯೂ ನಗರಸಭಾ ಅದಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರು, ತಹಶೀಲ್ದಾರ್, ಕಂದಾಯ ನಿರೀಕ್ಷಕರು , ಅಗ್ನಿ ಶಾಮಕದಳ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸದಾ ಕಟ್ಟೆಚ್ಚರದಿಂದ ಇರುವಂತೆ ಶಾಸಕರು ಸೂಚನೆಯನ್ನು ನೀಡಿದ್ದಾರೆ. ವಿಧಾನಸಭಾ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ನಾನು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು, ಕ್ಷೇತ್ರದ ಆಗುಹೋಗುಗಳ ಬಗ್ಗೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಶಾಸಕರು ತಿಳಿಸಿದ್ದಾರೆ.

Also Read  ಪುತ್ತೂರು: ಮೊದಲು ಮೊಬೈಲ್ ಸುಟ್ಟು, ಬಳಿಕ ಆತ್ಮಹತ್ಯೆಗೆ ಶರಣಾದ ಅಟೋ ಚಾಲಕ...!
error: Content is protected !!
Scroll to Top