(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 04. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಎಂಟು ತಿಂಗಳ ಮಗುವಿನ ತಾಯಿ, ತನ್ನ ಮಗುವಿನ ಸಾವಿಗೆ ಪತಿಯೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ಕುರಿತು ವರದಿಯಾಗಿದೆ.

ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಎಂಟು ತಿಂಗಳ ಮಗು ಜೀವಿತ್, ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 1 ರಂದು ಮಗು ಮೃತಪಟ್ಟಿದೆ. ಜುಲೈ 2 ರಂದು ಚಿತ್ರಾ ತನ್ನ ಮಗುವಿನ ಮರಣದ ಕುರಿತು ಸಂಶಯ ವ್ಯಕ್ತಪಡಿಸಿ ತನ್ನ ಗಂಡನ ಮೇಲೆ ದಾಖಲಿಸಿದ ದೂರಿನಲ್ಲಿ, “ನಾನು ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ನನ್ನ ತವರು ಮನೆಗೆ ಹೋಗುತ್ತೇನೆ ಎಂದು ನನ್ನ ಗಂಡನಿಗೆ ಹೇಳಿದಾಗ ಪತಿ ಶ್ರೀಧರ ಕೋಪಗೊಂಡು ಜಗಳವಾಡಿ ನನ್ನನ್ನು ತಳ್ಳಿದ್ದು, ಈ ವೇಳೆ ನಾನು ಮಗುವಿನೊಂದಿಗೆ ಕೆಳಗೆ ಬಿದ್ದೆ. ನಂತರ ಮಗುವಿನ ಜ್ವರ ಹೆಚ್ಚಾಯಿತು. ನನ್ನ ಪತಿ ನನ್ನನ್ನು ತಳ್ಳಿದಾಗ ಕೆಳಗೆ ಬಿದ್ದ ಕಾರಣ ನನ್ನ ಮಗುವಿನ ಸಾವಿಗೆ ಕಾರಣವಾಗಿರಬಹುದು” ಎಂದು ತಿಳಿಸಿದ್ದಾರೆ. ಪೊಲೀಸರು ಶ್ರೀಧರ ನಾಯ್ಕ ಅವರನ್ನು ವಿಚಾರಿಣೆ ನಡೆಸಿದ್ದು, ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
