(ನ್ಯೂಸ್ ಕಡಬ) newskadaba.com ಕಡಬ, ಜೂ.27. ಕಳೆದ ಎರಡು ತಿಂಗಳ ಹಿಂದೆ ಇಬ್ಬರನ್ನು ಕೊಂದು ಅಟ್ಟಹಾಸ ಮೆರೆದಿದ್ದ ಕಾಡಾನೆಗಳು ಮತ್ತೆ ಕಾಡಿನಿಂದ ರಸ್ತೆಗಿಳಿಯುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಮರ್ಧಾಳ ಸಮೀಪ ರಾಜ್ಯ ಹೆದ್ದಾರಿಯ ಆಸುಪಾಸಿನಲ್ಲಿ ಕಾಡಾನೆಗಳು ಕಂಡು ಬರುತ್ತಿವೆ.
ಮರ್ಧಾಳ ಸಮೀಪದ, ಭ್ರಾಂತಿಕಟ್ಟೆ, ಕೊಡೆಂಕೀರಿ, ಐತ್ತೂರು, ಆಜನ ಭಾಗದಲ್ಲಿ ಕಾಡಾನೆಗಳು ಸಂಚರಿಸಿ ಕೃಷಿ ನಾಶ ಮಾಡಿರುವುದಲ್ಲದೆ, ಮರ್ದಾಳ ಪೇಟೆಯ ಸಮೀಪ ಇರುವ ವಿಶೇಷ ಶಾಲೆಯ ಬಳಿಯ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟಿವೆ. ಮೊದಲೆಲ್ಲಾ ಕಾಡಿನಲ್ಲಿದ್ದ ಕಾಡಾನೆಗಳು ಇದೀಗ ಪೇಟೆಯ ಕಡೆಗೆ ಬಂದಿರುವುದರಿಂದ ಸಹಜವಾಗಿ ಜನರು ಆತಂಕಿತರಾಗಿದ್ದಾರೆ. ಕಾಡಾನೆಗಳನ್ನು ಕಂಡರೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿಗಳು ಹೇಳುತ್ತಿದ್ದರೂ, ಆನೆ ಬಂದಾಗ ಮಾಹಿತಿ ನೀಡಿದರೆ ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಭೇಟಿ ಕೊಡುತ್ತಾರಲ್ಲದೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆನೆಗಳ ಉಪಟಳದಿಂದ ಬೇಸತ್ತಿರುವ ಜನರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರರವರು ಪ್ರತಿಕ್ರಿಯಿಸಿ, ಕಾಡಾನೆಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಕಾಡಾನೆಗಳ ಉಪಟಳ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಪ್ರತಿದಿನ ಆನೆಗಳ ಓಡಾಟದ ಮೇಲೆ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಅವರು ತಿಳಿಸಿದ್ದಾರೆ.