(ನ್ಯೂಸ್ ಕಡಬ) newskadaba.com ಕಡಬ, ಜೂ.26. ತನಗೆ ಚಾಲಕ ಕೆಲಸ ನೀಡಿದ್ದ ತನ್ನ ಮಾಲಕನನ್ನೇ ಆರೋಪಿ ಚಾಲಕನೋರ್ವ ಮತ್ತಿಬ್ಬರ ಸಹಕಾರದೊಂದಿಗೆ ಹನಿಟ್ರ್ಯಾಪ್ ನಡೆಸಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಕಡಬ ತಾಲೂಕಿನ ಹೊಸ್ಮಠ ನಿವಾಸಿ, ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ವಾಸವಾಗಿರುವ ಕೃಷಿಕರೋರ್ವರು ಜೂನ್ 14 ರಂದು ತನ್ನ ಕಾರಿನಲ್ಲಿ ಚಾಲಕನ ಜೊತೆಗೆ ಮಂಗಳೂರಿನಿಂದ ಹೊಸ್ಮಠದ ತನ್ನ ಮನೆಗೆ ಆಗಮಿಸಿ ಮಧ್ಯಾಹ್ನದ ವೇಳೆಗೆ ಬಟ್ಟೆ ಬದಲಾಯಿಸಿ ತೋಟಕ್ಕೆ ತೆರಳಲು ಸಿದ್ಧರಾಗಿದ್ದ ಸಮಯದಲ್ಲಿ ಅಪರಿಚಿತ ಮುಸ್ಲಿಂ ಯುವತಿಯೋರ್ವಳು ಓರ್ವ ಯುವಕನೊಂದಿಗೆ ದ್ವಿಚಕ್ರ ವಾಹನದಲ್ಲಿ ಇವರ ಮನೆಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಅವರ ಕಾರು ಚಾಲಕನಾದ ಆರೋಪಿ ಫೈಸಲ್ ಎಂಬಾತ ಆಗಮಿಸಿದ ಅಪರಿಚಿತರ ಜೊತೆಗೆ ಶಾಮೀಲಾಗಿ ತನ್ನ ಮಾಲಕರನ್ನು ಅಪರಿಚಿತ ಯುವತಿಯ ಜೊತೆಗೆ ಬಲವಂತವಾಗಿ ಕುಳ್ಳಿರಿಸಿ ಫೋಟೋ ತೆಗೆದಿದ್ದಲ್ಲದೆ, 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ. ಮಾಲೀಕರು ಹಣ ನೀಡಲು ನಿರಾಕರಿಸಿದ ವೇಳೆ ಕೊಲೆ ಮಾಡುವುದಾಗಿ ಬೆದರಿಸಿದ್ದು, ಹಣ ನೀಡದೇ ಇದ್ದುದರಿಂದ ಮಾಲೀಕರ ಕಾರಿನ ಕೀಯನ್ನು ಎಳೆದುಕೊಂಡು ಹೋಗಿ ಕಾರನ್ನು ಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಬಳಿಕ ಅದೇ ದಿನ ರಾತ್ರಿ ಕರೆ ಮಾಡಿ 5 ಲಕ್ಷ ಹಣ ನೀಡದೇ ಇದ್ದಲ್ಲಿ ಕಾರನ್ನು ಅಪಘಾತ ಮಾಡುವುದಾಗಿ ಮತ್ತು ಕಾರನ್ನು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಘಟನೆ ನಡೆದು ಹಲವು ದಿನಗಳ ನಂತರ ಮಾಲೀಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 59/2023 ಕಲಂ: 384.506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.