(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 22. ಕೋವಿನ್ ಪೋರ್ಟಲ್ ನಿಂದ ಡೇಟಾ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಿಹಾರದಲ್ಲಿ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್ ನಲ್ಲಿ ಸೋರಿಕೆ ಮಾಡಿದ್ದಾನೆ ಎಂಬ ಆರೋಪವಿದ್ದು, ಇನ್ನೋರ್ವ ಆರೋಪಿ ಬಾಲಾಪರಾಧಿಯಾಗಿದ್ದಾನೆಂದು ತಿಳಿದುಬಂದಿದೆ. ನಾಗರಿಕರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಟೆಲಿಗ್ರಾಮ್ ಬಾಟ್ ಅನ್ನು ರಚಿಸಿದ ನಂತರ ಆರೋಪಿಯನ್ನು ಆತನ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕೋವಿನ್ ಪೋರ್ಟ್ ನಲ್ಲಿದ್ದ ಉನ್ನತ ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರ ಆಧಾರ್ ಸಂಖ್ಯೆ, ಪಾನ್ ಸಂಖ್ಯೆ, ವೋಟರ್ ಐಡಿ, ಪಾಸ್‌ಪೋರ್ಟ್ ಸಂಖ್ಯೆ ಹಾಗೂ ಇನ್ನಿತರ ವೈಯಕ್ತಿ ಮಾಹಿತಿಗಳು ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳ ನಾಯಕರು ಆಗ್ರಹಿಸಿದ್ದರು.