(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 22. ಬಂಟ್ವಾಳದ ಸವಾದ್ ಎಂಬಾತನನ್ನು ಕೊಲೆ ಮಾಡಿ ಮೂಡಿಗೆರೆ
ಪ್ರವಾಸಿ ತಾಣ ದೇವರಮನೆ ಗಡ್ಡೆಯ ಬಳಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೃತದೇಹದ ಪತ್ತೆಯ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ಗುರುವಾಯನಕೆರೆ ಎಂಬಲ್ಲಿ ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿ ಸವಾದ್ ನನ್ನು ಪಡುಬಿದ್ರೆಯ ಬೆಂಗ್ರೆ ಎಂಬಲ್ಲಿ ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದರು ಎಂದು ತಿಳಿದು ಬಂದಿದೆ. ಜೂನ್ 8 ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಬಳಿಕ ಬಂಟ್ವಾಳ ಮೂಲದ ಸವಾದ್ ಕುಟುಂಬ ಮಗನ ಮೃತದೇಹದ ಗುರುತು ಪತ್ತೆ ಮಾಡಿತ್ತು.