(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 20. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದ್ದ ಮಹತ್ವಾಕಾಂಕ್ಷಿ ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಗೆ ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ ಆರಂಭದಲ್ಲಿಯೇ ಸರ್ವರ್ ಸಮಸ್ಯೆ ಕಾಡುತ್ತಿದೆ.
ಈ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಿದ್ದು, ನಮ್ಮ ಕರ್ನಾಟಕ ಸರ್ಕಾರದ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹೀಗಾಗಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ನಮ್ಮ ಸಿಸ್ಟಮ್ಗಳನ್ನು ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಏನೇ ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೇ ತರುತ್ತೇವೆ. ಆನ್ ಲೈನ್ನಲ್ಲಿ ಸಮಸ್ಯೆಯಾದರೆ ಆಫ್ ಲೈನ್ ನಲ್ಲಿಯಾದರೂ ಅರ್ಜಿ ಪಡೆಯುತ್ತೇವೆ. ಇದರಿಂದ ಗ್ಯಾರಂಟಿ ಜಾರಿ ಒಂದು ತಿಂಗಳು ತಡವಾಗಬಹುದು ಅಷ್ಟೇ. ಅದಕ್ಕಿಂತಲೂ ಹೆಚ್ಚು ಆಗಲ್ಲ ಹೀಗಾಗಿ ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸುತ್ತೇವೆ ಎಂದಿದ್ದಾರೆ.