ಆತೂರು: ಕೆಮ್ಮಾರ ಸ.ಉ.ಹಿ.ಪ್ರಾ.ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕ ಅಶೋಕ್ ರೈಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 20. ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಕೋರಿ ಸ್ಥಳೀಯ ಶಾಸಕರಾದ ಅಶೋಕ್ ಕುಮಾರ್ ರೈ ಯವರಿಗೆ ಕೆಮ್ಮಾರ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

1954 ರಲ್ಲಿ ಪ್ರಾರಂಭಗೊಂಡು 69 ವರ್ಷ ಹಳೆಯದಾದ ಕೆಮ್ಮಾರ ಸರಕಾರಿ ಶಾಲೆಯ ಕಟ್ಟಡವು ತೀರಾ ಶಿಥಿಲಗೊಂಡಿದ್ದು, ಮೇಲ್ಚಾವಣಿ ಗೆದ್ದಲು ಹಿಡಿದಿರುತ್ತದೆ. ಆದರೆ ಇಷ್ಟರವರೆಗೆ ಸರಕಾರದಿಂದ ಯಾವುದೇ ಹೊಸ ಕಟ್ಟಡಕ್ಕೆ ಅನುದಾನ ಒದಗಿ ಬಂದಿರುವುದಿಲ್ಲ. ಪ್ರಾರಂಭದಿಂದ ಈ ಶಾಲೆಯಲ್ಲಿ ಸರಿಸುಮಾರು 700 ರಷ್ಟು ಮಕ್ಕಳು ವಿದ್ಯಾರ್ಜನೆಗೈಯುತ್ತಿದ್ದು, ಅಭಿವೃದ್ಧಿಯ ಕೊರತೆಯಿಂದ ಮಕ್ಕಳ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗಿತ್ತು. ಕಳೆದ ಅವಧಿಯಿಂದ ಶಾಲೆಯು ಶೈಕ್ಷಣಿಕ ಪ್ರಗತಿ ಮತ್ತು ಮಕ್ಕಳ ಸಂಖ್ಯೆಯು ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಕಟ್ಟಡದ ಅವ್ಯವಸ್ಥೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಮಾತ್ರವಲ್ಲದೇ ಆರು ಮಂದಿ ಶಿಕ್ಷಕರ ನೇಮಕಾತಿಯಲ್ಲಿ ನಾಲ್ಕು ಮಂದಿ ಮಾತ್ರ ನೇಮಕಗೊಂಡಿದ್ದು ಶಿಕ್ಷಕರ ಕೊರತೆಯು ಕೂಡಾ ಇಲ್ಲಿ ಉಂಟಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಸರಿಸುಮಾರು 3.56 ಎಕರೆ ವಿಸ್ತಾರದಲ್ಲಿ ಕೆಮ್ಮಾರ ಸರಕಾರಿ ಶಾಲೆಯು ಹೊಂದಿದ್ದು, ಕಳೆದ ಅವಧಿಯಲ್ಲಿ ಮಾದರಿ ಶಾಲೆಯಾಗಿ ಘೋಷಣೆಯಾಗಿತ್ತು. ಈ ಎಲ್ಲಾ ವಿಚಾರವನ್ನು ಶಾಸಕರ ಗಮನಕ್ಕೆ ತಂದು ಶಾಲೆಯ ಪ್ರಗತಿಗಾಗಿ ಶಾಲಾಭಿವೃಧ್ದಿ ಸಮಿತಿಯು ಸ್ಥಳೀಯ ಶಾಸಕರಿಗೆ ಮನವಿಯನ್ನು ಸಲ್ಲಿಸಿದೆ. ಈ ಪ್ರಕಾರವಾಗಿ ಶಾಸಕರು ಉತ್ತಮ ಸ್ಪಂದನೆಯನ್ನು ನೀಡಿರುತ್ತಾರೆ. ನಿಯೋಗದಲ್ಲಿ ಕೆಮ್ಮಾರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ, ಸದಸ್ಯರಾದ ಪದ್ಮನಾಭ ಶೆಟ್ಟಿ ನಡುಬಡಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Also Read  ಅಸಹಾಯಕ ಯುವಕನಿಗೆ ನೆರವು ನೀಡಿದ ಉಪ್ಪಿನಂಗಡಿ ಆಟೋ ಚಾಲಕರು

error: Content is protected !!
Scroll to Top