ಬಿಜೆಪಿಯವರು 25 ವರ್ಷಗಳ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಲಿ ► ಸುಳ್ಯ ಶಾಸಕರಿಗೆ ಕಾಂಗ್ರೆಸ್ ಉಸ್ತುವಾರಿ ಸವಿತಾ ರಮೇಶ್ ಸವಾಲು

(ನ್ಯೂಸ್ ಕಡಬ) newskadaba.com ಕಡಬ, ಜ.23. ಕಳೆದ ಇಪ್ಪತೈದು ವರ್ಷಗಳಿಂದ ಸುಳ್ಯ ವಿಧಾನ ಸಭಾಕ್ಷೆತ್ರವನ್ನು ಗೆದ್ದುಕೊಂಡು ಬಂದಿರುವ ಬಿಜೆಪಿ ಕನಿಷ್ಟ ಮೂಲಭೂತ ವ್ಯವಸ್ಥೆಯಾದ ರಸ್ತೆಗಳನ್ನು ಸರಿಪಡಿಸಲಾಗದೆ ಕೇವಲ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುತ್ತಿದೆ. ಇಲ್ಲಿನ ಶಾಸಕರು 25 ವರ್ಷಗಳ ತಮ್ಮ ಸುಧೀರ್ಘ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಕಾರ್ಯಗಳ ಶ್ವೇತಪತ್ರ ಹೊರಡಿಸಲಿ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಸುಳ್ಯ, ಪುತ್ತೂರು ವಿಧಾನಸಭಾಕ್ಷೇತ್ರದ ಕಾಂಗ್ರೇಸ್ ಪಕ್ಷದ ಉಸ್ತುವಾರಿ ಸವಿತಾ ರಮೇಶ್ ಸವಾಲು ಹಾಕಿದರು.

ಅವರು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಪ್ಪತೈದು ವರ್ಷಗಳಿಂದ ಒಂದು ಕ್ಷೇತ್ರದಲ್ಲಿ ಒಬ್ಬರೇ ಶಾಸಕರಿದ್ದು ಯಾವುದೇ ಅಭಿವೃದ್ಧಿ ಹೊಂದದ ಕ್ಷೇತ್ರವೆಂದರೆ ಅದು ಸುಳ್ಯ ವಿಧಾನ ಸಭಾ ಕ್ಷೇತ್ರ. ಇಲ್ಲಿ ಬಿಜೆಪಿಯವರು ಸದಾ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ಗೆದ್ದುಬರುತ್ತಾರೆ ಹೊರತು ಅಭಿವೃದ್ಧಿಯ ಆಧಾರದಲ್ಲಿ ಅಲ್ಲ. ಕ್ಷೇತ್ರದಲ್ಲಿ ನಮ್ಮ ಶಾಸಕರು ಇಲ್ಲದಿದ್ದರೂ ಹಲವಾರು ರಸ್ತೆ ಹಾಗೂ ಸೇತುವೆಗಳಿಗೆ ಕಾಂಗ್ರೇಸ್ ಮುಖಂಡ ಡಾ|ರಘು ಮುಖಾಂತರ ರಾಜ್ಯ ಸರಕಾರ ಅನುದಾನ ಒದಗಿಸಿದೆ, ಇಲ್ಲಿ ಬಿಜೆಪಿ ಯ ಗೆಲುವಿನ ಅಂತರ ಆರಂಭದಲ್ಲಿ 24 ಸಾವಿ ಇದ್ದಿರುವುದು ಕಳೆದ ಚುನಾವಣೆ ಸಂದರ್ಭದಲ್ಲಿ ಕೇವಲ 1300 ಕ್ಕೆ ಬಂದು ನಿಂತಿದೆ, ಇದರಿಂದ ಕ್ಷೇತ್ರದಲ್ಲಿ ಬಿಜೆಪಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ಬಾರಿ ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್ ಅಧಿಕಾರಕ್ಕೆ ಬರಲಿದ್ದು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ವಿಜಯಪತಾಕೆ ಹಾರಿಸಲಿದೆ, ಇಲ್ಲಿನ ಜನತೆ ಬದಲಾವಣೆ ಬಯಸಿದ್ದು. ಅದು ಕಾಂಗ್ರೇಸ್ಗೆ ಮತವಾಗಿ ಪರಿವರ್ತನೆಯಾಗಲಿದೆ. ಆ ಮೂಲಕ ಸುಳ್ಯದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಲಿದೆ ಎಂದರು.

Also Read  ಕಡಬ: ಇಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಪಕೀರಮೂಲ್ಯ ಅಧಿಕಾರ ಸ್ವೀಕಾರ

ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗಿದ್ದ ಸುಳ್ಯದ ಸದಾನಂದ ಗೌಡ, ಮಂತ್ರಿಯಾಗಿದ್ದ ಇದೇ ಕ್ಷೇತ್ರದ ಶೋಭಾ ಕರಂದ್ಲಾಜೆ ಅವರ ಕೊಡುಗೆ ಈ ಕ್ಷೇತ್ರಕ್ಕೆ ಶೂನ್ಯ, ಇಲ್ಲಿನ ಅಡಕೆ ಹಾಗೂ ರಬ್ಬರ್ ಕೃಷಿಕರು ತಮ್ಮ ಬೆಳೆಗಳಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದರೂ ಕೇಂದ್ರದ ಮಂತ್ರಿಯಾಗಿದ್ದುಕೊಂಡು ಸದಾನಂದ ಗೌಡರು ಏನೂ ಮಾಡಿಲ್ಲ, ಇನ್ನು ಸಂಸದರ ಗುರತರವಾದ ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿ ಕಾರ್ಯ ಇಲ್ಲಿ ಕಾಣುತ್ತಿಲ್ಲ. ಶೋಭಾ ಕರಂದ್ಲಾಜೆಯವರ ಮಹಿಳಾ ಪರ ಹೋರಾಟ ಕೇವಲ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿದೆ. ಅವರದ್ದೇ ಸಂಘಪರಿವಾರದ ಕಾರ್ಯಕರ್ತರ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡವರ ವಿರುದ್ಧ ಧ್ವನಿ ಎತ್ತುವ ತಾಕತ್ತು ಅವರಿಗಿಲ್ಲ ಎಂದು ಲೇವಡಿ ಮಾಡಿದ ಸವಿತಾ ರಮೇಶ್ ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಇದ್ದಾಗ ಅನಿಲಕ್ಕೆ 50 ಪೈಸೆ ಏರಿದಾಗ ರಸ್ತೆಯಲ್ಲಿ ಅಡುಗೆ ಮಾಡಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದರು. ಆದರೆ ಈಗ ಅನಿಲ ಸಿಲಿಂಡರ್ ಒಂದರೆ ಬೆಲೆ 800 ದಾಟಿದರೂ ಮಾತೆತ್ತುತ್ತಿಲ್ಲ, ಪೆಟ್ರೋಲ್ ಬೆಲೆ ಏರಿಕೆಯಾದಗಲೂ ಬಾಯಿಮುಚ್ಚಿ ಕೂರುತ್ತಾರೆ, ಕಾಂಗ್ರೇಸ್ ಏನು ಮಾಡಿದೆ ಎಂದು ಕೇಳುತ್ತಿರುವ ಬಿಜೆಪಿಗರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಹಸಿವು ಮುಕ್ತ ರಾಜ್ಯವಾಗಬೇಕೆಂದು ಅನ್ನಭಾಗ್ಯ ಯೋಜನೆಯನ್ನು ಜಾರುಗೆ ತಂದರೆ ಅದನ್ನು ಕೇಂದ್ರ ಸರಕಾರದ ಅಕ್ಕಿ ಎಂದು ಹೇಳುವ ಬಿಜೆಪಿಯವರು ಅನ್ನಭಾಗ್ಯ ಯೋಜನೆ ತರುವಾಗ ಕೇಂದ್ರದಲ್ಲಿ ಯಾರು ಅಧಿಕಾರದಲ್ಲಿದ್ದರು ಎನ್ನುವುದನ್ನು ಹೇಳಬೇಕು. ರೈತರ ಸಾಲ ಮನ್ನಾ ಮಾಡಿರುವ ರಾಜ್ಯ ಸರಕಾರ ರೈತರ ನೆರವಿಗೆ ಬಂದಿದೆ, ತಾಕತ್ತಿದ್ದರೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ರೈತರ ಸಾಲ ಮನ್ನ ಮಾಡಲಿ ಎಂದರು.

Also Read  ಕಡಬ ಪುತ್ತೂರು ತಾಲೂಕಿನಲ್ಲಿ ಇಂದು 4 ಮಂದಿಯಲ್ಲಿ ಕೊರೋನಾ ದೃಢ

ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನೆಲ್ಲಾ ನೀಡಿ ನುಡಿದಂತೆ ನಡೆದುಕೊಂಡಿದೆ. ಹತ್ತು ಹಲವು ಭಾಗ್ಯಗಳೊಂದಿಗೆ, ಸುಳ್ಯದ ತಮಿಳು ರಬ್ಬರ್ ಕಾರ್ಮಿಕರಿಗೆ ಜಾತಿಪ್ರಮಾಣ ಪತ್ರ, ಸಾವಿರಾರು ಫಲಾನಿಭವಿಗಳಿಗೆ 94 ಸಿ ಯಲ್ಲಿ ಹಕ್ಕು ಪತ್ರ ನೀಡಿದ ಹೆಗ್ಗಳಿಕೆ ನಮ್ಮದು ಈ ಎಲ್ಲಾ ವಿಚಾರಗಳನ್ನು ಮನಗಂಡು ಸುಳ್ಯ ವಿಧಾನ ಸಭಾ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ತಂದು ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಡಾ|ರಘ ಅವರನ್ನು ಅಭ್ಯರ್ಥಿತನದಿಂದ ಬದಲಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸವಿತಾ ಆಕಾಂಕ್ಷಿಗಳು ಹಲವಾರು ಜನ ಇರುವುದು ಸಹಜ, ಆದರೆ ನಮ್ಮಲ್ಲಿ ಹೈಕಮಾಂಡ್ ಎಲ್ಲವನ್ನೂ ಗಮನಿಸಿ ಟಿಕೆಟ್ ಹಂಚಿಕೆ ಮಾಡುತ್ತದೆ. ನಾವು ಇದರಲ್ಲಿ ಏನೂ ಹೇಳಲು ಸಾಧ್ಯವಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿ.ಸಿಸಿ ಸದಸ್ಯ ಡಾ|ರಘು ಬೆಳ್ಳಿಪ್ಪಾಡಿ, ಡಿ.ಸಿಸಿ ಕಾರ್ಯದರ್ಶಿ ಕಡಬ ಬ್ಲಾಕ್ ಉಸ್ತುವಾರಿ ಉಲ್ಲಾಸ್ ಕೋಟ್ಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್, ಸುಳ್ಯ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೇಸ್ ಅಧ್ಯಕ್ಷ ಸಿದ್ದಿಕ್, ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ವಕ್ಟ್‌ ಬೋರ್ಡ್ ಮಾಜಿ ಸದಸ್ಯ ಎಚ್.ಆದಂ, ಕಾಂಗ್ರೇಸ್ ಮುಖಂಡರಾದ ರಾಯ್ ಅಬ್ರಹಾಂ, ರಾಧಾಕೃಷ್ಣ ರೈ ಪರಾರಿ, ಮಾಧವ ಪುಜಾರಿ, ತೋಮಸ್ ಇಡೆಯಾಳ್, ಗುರುಪ್ರಸಾದ್ ಮೊದಲಾದವರು ಉಪಸ್ಥಿರಿದ್ದರು.

Also Read  ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ➤ ಎಸ್ಡಿಪಿಐ ವತಿಯಿಂದ ದೂರು ದಾಖಲು

error: Content is protected !!
Scroll to Top