(ನ್ಯೂಸ್ ಕಡಬ) newskadaba ಮೈಸೂರು, ಜೂ. 17. ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳವನ್ನು ಖರೀದಿಸಬೇಕು ಎಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಹಾಗೂ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಅದಕ್ಕೆ ಒಪ್ಪಿಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಕೇಂದ್ರದಿಂದ ಖರೀದಿಸುವ ಬದಲು ರೈತರಿಂದ ಅಕ್ಕಿ ಖರೀದಿಸಿ ಎಂದು ಹೇಳಿದ್ದಾರೆ. ರಾಜ್ಯದ ಜನರ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಬದಲು ನಮ್ಮ ರೈತರಿಂದಲೇ ನೇರವಾಗಿ ಖರೀದಿಸಿ ಅದನ್ನೇ ಅನ್ನಭಾಗ್ಯ ಯೋಜನೆಗೆ ನೀಡಬೇಕು. ಇದರಿಂದ ರೈತರಿಗೆ ಮತ್ತು ಬಡವರಿಗೆ ಅನುಕೂಲವಾಗಲಿದ್ದು, ಈ ಬಗ್ಗೆ ಚಿಂತನೆ ನಡೆಸುವಂತೆ ಅವರು ಪತ್ರ ಬರೆದಿದ್ದಾರೆ.