ಮಂಗಳೂರು: ಜೂ. 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ➤ ಅಚ್ಚುಕಟ್ಟಾಗಿ ಸಂಘಟಿಸಲು ಜಿಲ್ಲಾಧಿಕಾರಿ ಸಲಹೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.17. ಜಿಲ್ಲೆಯಾದ್ಯಂತ ಇದೇ ತಿಂಗಳ 21ರಂದು ಹಮ್ಮಿಕೊಳ್ಳಲಾಗಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಸಂಘಟಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಜಿಲ್ಲಾ ಆಯುಷ್ ಅಧಿಕಾರಿ ಇಕ್ಬಾಲ್ ಅವರಿಗೆ ನಿರ್ದೇಶನ ನೀಡಿದರು. ಅವರು ಶುಕ್ರವಾರದಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆಯುಷ್ಯ ಇಲಾಖೆ, ಆಯುಷ್ ಕಾಲೇಜುಗಳು, ವಿವಿಧ ಇಲಾಖೆಗಳು, ವಿವಿಧ ಯೋಗ ಸಂಘಟನೆಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಅದರ ಮುಖ್ಯ ಕಾರ್ಯಕ್ರಮ ಮಂಗಳೂರಿನ ಪುರಭವನದ ಮಿನಿ ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಶಿಷ್ಟಾಚಾರದಂತೆ ವಿಧಾನಸಭೆಯ ಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದರು. ಈ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಕುಡಿಯುವ ನೀರು ಪೂರೈಕೆ, ಶೌಚಾಲಯ, ಪೊಲೀಸ್ ಬಂದೋಬಸ್ತ್ ಹಾಗೂ ಭಾಗವಹಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು, ನಗರದಲ್ಲಿ ಮುಖ್ಯ ಕಾರ್ಯಕ್ರಮ ನಡೆಯುವ ಮಿನಿ ಸಭಾಂಗಣದಲ್ಲಿ ಈ ಸ್ಪಚ್ಚತಾ ಕಾರ್ಯ, ಕುಡಿಯುವ ನೀರು ಪೂರೈಕೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆ ನಿರ್ವಹಸಬೇಕೆಂದು ಅವರು ತಿಳಿಸಿದರು. ಯೋಗ ಪ್ರದರ್ಶನ ಉತ್ತಮವಾಗಿ ಮೂಡಿಬರಲು ಅನುಕೂಲವಾಗುವಂತೆ ಪೂರ್ವಭಾವಿಯಾಗಿ ತಾಲೀಮು ನಡೆಸಬೇಕು ಹಾಗೂ ಯೋಗಕ್ಕೆ ಅಗತ್ಯವಿರುವ ಮ್ಯಾಟ್ ಹಾಗೂ ಇತರೆ ಪರಿಕರಗಳನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯೋಗ ದಿನಾಚರಣೆಗೆ ಅಗತ್ಯವಿರುವ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು, ಎನ್‍ಎಸ್‍ಎಸ್ ಸಂಯೋಜಕರು, ವೆಲ್‍ನೆಸ್ ಸೆಂಟರ್‍ ಗಳ ಯೋಗ ಪಟುಗಳನ್ನು ಆಹ್ವಾನಿಸಬೇಕು. ಮುಖ್ಯ ಕಾರ್ಯಕ್ರಮ ನಡೆಯುವ ಮಿನಿಹಾಲಿನಲ್ಲಿ ಅಗತ್ಯ ಸಂಖ್ಯೆಯ ಯೋಗಪಟುಗಳನ್ನು ಮಾತ್ರ ಆಹ್ವಾನಿಸಬೇಕು. ಪ್ರತಿವರ್ಷದಂತೆ ಗೋಪಾಲಕೃಷ್ಣ ದೇಲಂಪಾಡಿ ಅವರ ಸಾರಥ್ಯದಲ್ಲಿ ಯೋಗ ದಿನಾಚರಣೆಯನ್ನು ಕೈಗೊಳ್ಳುವಂತೆ ಅವರು ತಿಳಿಸಿದರು.

Also Read  ಫಲಾನುಭವಿಗಳಿಂದ ಸಾರಿಗೆ ಸೌಲಭ್ಯ ಪಡೆದರೆ ಕ್ರಮ ➤ ಜಿಲ್ಲಾಧಿಕಾರಿ ರವಿಕುಮಾರ್

ಜಿಲ್ಲಾ ಆಯುಷ್ ಅಧಿಕಾರಿ ಇಕ್ಬಾಲ್ ಮಾತನಾಡಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ, ಜಿಲ್ಲೆಯ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ, ಯೋಗ ಸಂಘಟನೆಗಳು ಈ ಕಾರ್ಯಕ್ರಮದ ಯಶಸ್ವಿಗೆ ಪೂರ್ವ ತಯಾರಿ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಸುಮಾರು ಒಂದು ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಯುಷ್ ಇಲಾಖೆಯ ಅಧೀನದ ಎಲ್ಲಾ ಕ್ಷೇಮ ಕೇಂದ್ರಗಳಲ್ಲಿ ಒಂದು ತಿಂಗಳಿನಿಂದ ಸಾರ್ವಜನಿಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

Also Read  ಕಣ್ಣೂರು ಕರಾವಳಿಯ ಮೀನುಗಾರಿಕೆಯಿಂದ ಕೂಡಲೇ ವಾಪಸ್ಸಾಗಲು ಡಿಸಿ ಸೂಚನೆ


ಈ ವರ್ಷದ ಧ್ಯೇಯ ವಾಕ್ಯ ಯೋಗ ಫಾರ್ ವಸುದೈವ ಕುಟುಂಬಕಂ ಪ್ರತಿ ಅಂಗಳದಲ್ಲಿ ಯೋಗ ಎಂಬಂತೆ ಜಿಲ್ಲೆಯ ಪ್ರತಿ ಮನೆಗೂ ಯೋಗದ ಪ್ರಯೋಜನವನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಯೋಗದ ಯಶಸ್ವಿಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಸೂಕ್ತ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಯವರು ಕೋರಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧ ಯೋಗ ಸಂಘಟನೆಗಳ ಪ್ರಮುಖರು, ಯೋಗಾಸಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

error: Content is protected !!
Scroll to Top