ರಕ್ತದಾನದಿಂದ ಭ್ರಾತೃತ್ವ ವೃದ್ಧಿಸುತ್ತದೆ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನಕ್ಕೆ ಮುಂದಾಗುವುದು ಧನಾತ್ಮಕ ಬೆಳವಣಿಗೆ ಎಂದು ಖ್ಯಾತ ವೈದ್ಯ ಡಾ|| ಕಿಶನ್ ರಾವ್ ಬಾಳಿಲ ಅವರು ನುಡಿದರು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕದಳ ಕಛೇರಿಯಲ್ಲಿ ರಕ್ತದಾನ ಶಿಬಿರವು ನಡೆಯಿತು. ಈ ಸಂದರ್ಭದಲ್ಲಿ ತೇಜಸ್ವಿನಿ ಆಸ್ಪತ್ರೆಯ ಡಾ|| ವಾಸುದೇವ ಪ್ರಭು ಅವರು ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಪ್ರತಿ ಆರೋಗ್ಯವಂತ ಪುರುಷ 18 ವರ್ಷದ ಬಳಿಕ 65 ವರ್ಷದವರೆಗೆ ವರ್ಷದ ನಾಲ್ಕು ಬಾರಿ ರಕ್ತದಾನ ಮಾಡಬಹುದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ 12ಕ್ಕಿಂತ ಜಾಸ್ತಿ ಇದ್ದು ದೇಹದ ತೂಕ 45 ಕೆ.ಜಿ ಗಿಂತ ಜಾಸ್ತಿ ಇರಬೇಕು. ಮಹಿಳೆಯರ ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ನುಡಿದರು.

Also Read  ದ.ಕ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ವರ್ಗಾವಣೆ ► ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂತಿಲ್ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ರಕ್ತದಾನದ ಮಹತ್ವದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆಚರಣೆಯನ್ನು 2004 ರಲ್ಲಿ ಆರಂಭಿಸಲಾಯಿತು. ಜೂನ್ 14 ರಂದು ಆಚರಿಸುವ ಉದ್ದೇಶ ಏನೆಂದರೆ ರಕ್ತದ ಗುಂಪನ್ನು ಕಂಡುಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್‍ಸ್ಟೈನರ್  ಅವರು ಹುಟ್ಟಿದಂತ ದಿನ. ಅವರು ರಕ್ತದ ಗುಂಪನ್ನು ಸಂಶೋಧನೆ ಮಾಡಿದ ಕಾರಣದಿಂದ ಲಕ್ಷಾಂತರ ಜನರ ಜೀವವನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗುತ್ತಿದೆ.  ಈ ಒಂದು ರಕ್ತದ ಗುಂಪನ್ನು ವರ್ಗೀಕರಣ ಮಾಡಿದ ಕಾರ್ಲ್ ಲ್ಯಾಂಡ್‍ಸ್ಟೈನರ್  ಅವರನ್ನು ನೆನಪಿಸಿಕೊಳ್ಳುವ ಸುದಿನ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಈ ರಕ್ತದಾನಿಗಳ ದಿನಾಚರಣೆ ಎಂದು ಆಚರಣೆ ಮಾಡಿ ಜನರಲ್ಲಿ ಮತ್ತಷ್ಟು ರಕ್ತದಾನ ಮಾಡುವಂತೆ ಪ್ರೇರೇಪಣೆ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ನಿರಂತರವಾಗಿ ರಕ್ತದಾನ ಶಿಬಿರ ಮಾಡುತ್ತಿದೆ, ಸ್ಪೂರ್ತಿ ನೀಡುತ್ತಿದೆ, ಪ್ರೇರಣೆ ನೀಡುತ್ತಿದೆ. ಒಬ್ಬ ವ್ಯಕ್ತಿಯ ದೇಹದಲ್ಲಿ ಇರುವಂತ 5 ರಿಂದ 6 ಲೀಟರ್ ರಕ್ತದಲ್ಲಿ ಒಮ್ಮೆ ರಕ್ತದಾನ ಮಾಡುವಾಗ ಕೇವಲ 350ml ರಕ್ತವನ್ನು ಮಾತ್ರ ತೆಗೆಯುವಂತದ್ದು ಇದನ್ನು 40 ದಿವಸದ ಒಳಗೆ ಇನ್ನೊಬ್ಬ ವ್ಯಕ್ತಿಗೆ ಕೊಡಲು ಆಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ದೇಶದ ಜನಸಂಖ್ಯೆಯ 1 ಶೇಕಡಾ ಜನರು ರಕ್ತದಾನ ಮಾಡಬೇಕೆಂದು ಸಾಮಾನ್ಯ ಲೆಕ್ಕಚಾರ ಮಾಡಿ ನಮ್ಮ ದೇಶದ 140 ಕೋಟಿಯಲ್ಲಿ 10 ಕೋಟಿ ಜನರು ರಕ್ತದಾನ ಮಾಡಿದರೆ ನಮ್ಮ ದೇಶದ ರಕ್ತದ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಿದೆ, ಆದರೆ ನಮ್ಮ ದೇಶದಲ್ಲಿ ಒಂದುವರೆ ಕೋಟಿ ಜನರು ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲದ ಕಾರಣ ರಕ್ತ ರಕ್ತದಾನಿಗಳಿಂದಲೇ ಬರಬೇಕು ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ರಕ್ತದಾನ ಮಾಡಬೇಕು ಎಂದು ನುಡಿದರು.

Also Read  ಮಿತ್ತೂರು: ಕಂಟೈನರ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಕಬ್ಬಿಣದ ಬೃಹತ್ ರೋಲ್ ► ಕಾರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾದ ಪ್ರಯಾಣಿಕರು

ಈ ಸಂದರ್ಭದಲ್ಲಿ ಉಪಸಮಾದೇಷ್ಟ ಶ್ರೀ ರಮೇಶ್, ಕಛೇರಿ ಅಧೀಕ್ಷಕಿ ಶ್ರೀಮತಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಮೀನಾಕ್ಷಿ, ಉಳ್ಳಾಲ ಘಟಕದ ಘಟಕಾಧಿಕಾರಿ ಭಾಸ್ಕರ್ ಎಂ, ಸುರತ್ಕಲ್ ಘಟಕದ ಘಟಕಾಧಿಕಾರಿ ಶ್ರೀ ರಮೇಶ್,  ಮಂಗಳೂರು ಘಟಕದ ಸಾರ್ಜೆಂಟ್ ಸುನಿಲ್, ಗೃಹರಕ್ಷಕರಾದ ಕನಕಪ್ಪ, ದಿವಾಕರ್, ರಂಗಪ್ಪ, ರಂಜಿತ್, ಪ್ರಸಾದ್, ನಿಖಿಲ್, ಸುಲೋಚನಾ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ತೇಜಸ್ವಿನಿ ಆಸ್ಪತ್ರೆಯ ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು 15 ಮಂದಿ ಗೃಹರಕ್ಷಕರು ರಕ್ತದಾನ ಮಾಡಿದರು.

error: Content is protected !!
Scroll to Top