(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 15. ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಾರ್ಥನೆ ಸಂದರ್ಭ ಸಂವಿಧಾನದ ಪೀಠಿಕೆ ಓದುವುದನ್ನು ಜಾರಿಗೆ ತರಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯ ನಂತರ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಮಹದೇವಪ್ಪ, ಖಾಸಗಿ, ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲೂ ಸಂವಿಧಾನದ ಪೀಠಿಕೆ ಓದಬೇಕು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದರು. ಪ್ರತಿಯೊಬ್ಬರೂ ಪರಸ್ಪರ ಸಮಾನತೆ, ಪ್ರೀತಿ, ಸೋದರತ್ವದಿಂದ ಇರಬೇಕು ಎಂಬ ಉದ್ದೇಶದಿಂದ ಸಂವಿಧಾನದ ಪೀಠಿಕೆಯನ್ನು ಓದುವುದನ್ನು ಜಾರಿಗೆ ತರುತ್ತಿದ್ದೇವೆ. ಇದರಿಂದ ನೈತಿಕತೆಯ ಮಟ್ಟ ಹೆಚ್ಚಾಗುವುದಲ್ಲದೆ, ಎಲ್ಲಾ ಜಾತಿ, ಧರ್ಮವನ್ನು ಸಮಾನ ದೃಷ್ಟಿಯಿಂದ ಕಾಣುವಂತಾಗುತ್ತದೆ. ಇದನ್ನು ಪ್ರತಿ ದಿನ ಕಡ್ಡಾಯವಾಗಿ ಓದಬೇಕು. ಅದೇ ರೀತಿ ಗ್ರಾಪಂ, ತಾಪಂ, ಪುರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯ ಫೋಟೋವನ್ನು ಹಾಕಬೇಕು ಎಂದರು.