(ನ್ಯೂಸ್ ಕಡಬ) newskadaba.com ಗದಗ, ಜೂ. 15. ಸೂಕ್ತ ಸೌಕರ್ಯ ಕಲ್ಪಿಸಿಕೊಡುವಂತೆ ಪಂಚಾಯತ್ ಗೆ ಮನವಿ ಸಲ್ಲಿಸುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಬ್ಬ ಗುತ್ತಿಗೆದಾರ ನನಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ‘ಕನ್ಯಾ ಭಾಗ್ಯ’ ಜಾರಿಗೊಳಿಸುವಂತೆ ಪಿಡಿಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾನೆ.
ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಇದೀಗ ಮದುವೆಯಾಗಲು ಹುಡುಗಿ ಹುಡುಕಿ ಸುಸ್ತಾದ ಗುತ್ತಿಗೆದಾರ ಮುತ್ತು ಹೂಗಾರ(28) ಎಂಬಾತ ‘ಕನ್ಯಾ ಭಾಗ್ಯ’ ಜಾರಿಗೊಳಿಸಲು ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತ್ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾನೆ. ತನಗೆ ತಿಂಗಳಿಗೆ 50 ಸಾವಿರ ರೂ. ಆದಾಯವಿದ್ದರೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ನನಗೆ ಸಹೋದರ, ಸಹೋದರಿ ಯಾರೂ ಇಲ್ಲ. ಪ್ರತಿ ಹಳ್ಳಿ-ಹಳ್ಳಿ ಸುತ್ತಾಡಿ ಕನ್ಯೆ ನೋಡಿದ್ದೇನೆ. ಒಳ್ಳೆಯ ಆದಾಯವಿದೆ, ಆದರೆ ಸರ್ಕಾರಿ ಉದ್ಯೋಗ ಇಲ್ಲವೆಂದು ಯಾರೂ ಹೆಣ್ಣು ಕೊಡುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿದೆ. ನನಗೆ ಸಂಗಾತಿಯನ್ನು ಹುಡುಕಿ ಕೊಡಿ ಎಂದು ಗುತ್ತಿಗೆದಾರ ಅಳಲು ತೋಡಿಕೊಂಡಿದ್ದಾನೆ. ಮದುವೆಯಾಗಲು ಯಾವುದೇ ಜಾತಿಯ ಕನ್ಯೆಯಾದರೂ ಪರವಾಗಿಲ್ಲ ಎಂದು ಹೇಳಿದ್ದಾನೆ.