ಮನೆ ಕಳ್ಳತನ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 1 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ಬಂಧಿತರನ್ನು ಕಾರ್ಕಳ ತಾಲೂಕಿನ ಮಾಳ ಮಲ್ಲಾರ್ ದರ್ಕಾಸು ಮನೆ ನಿವಾಸಿ ಗಣೇಶ ನಾಯ್ಕ್(26) ಹಾಗೂ ಕೊಡಗು ಜಿಲ್ಲೆಯ ಗುಯ್ಯಾ ಗ್ರಾಮ ನಿವಾಸಿ ರಂಜಿತ್ ಕೆ.ಆರ್ (26) ಎಂದು ಗುರುತಿಸಲಾಗಿದೆ. ಇವರು ಜನವರಿ 15ರಿಂದ ಜನವರಿ 16ರ ನಡುವೆ ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯ ಎದುರಿನ ಬಾಗಿಲಿನ ಲಾಕನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದನ್ನು ಕಳವುಗೈದಿದ್ದು, ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಗರ ಅಪರಾಧ ವಿಭಾಗಕ್ಕೆ (ಸಿಸಿಬಿ) ಹಸ್ತಾಂತರಿಸಲಾಗಿತ್ತು. ಯಾವುದೇ ಸುಳಿವು ಇಲ್ಲದ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣವನ್ನು ಭೇದಿಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1 ಕೆಜಿ ವಿವಿಧ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ರೂ. 55 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಆರೋಪಿಗಳಿಂದ 2 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದೆ ಸರಿದ ಮಿಥುನ್ ರೈ...!

error: Content is protected !!
Scroll to Top