(ನ್ಯೂಸ್ ಕಡಬ) newskadaba.com ವಾಮಂಜೂರು, ಜೂ. 13. ತಿರುವೈಲು ವಾರ್ಡ್ ನಲ್ಲಿ ಕಾರ್ಯಾಚರಿಸುತ್ತಿರುವ ವೈಟ್ ಗ್ರೋ ಎಗ್ರಿ ಎಲ್ ಎಲ್ ಪಿ ಅಣಬೆ ಉತ್ಪಾದನಾ ಘಟಕವನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಯ ದಾರಿ ತಪ್ಪಿಸಲು ಗಲಭೆ ನಡೆಸಲು ಮುಂದಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸದಿದ್ದಲ್ಲಿ ವಾಮಂಜೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೋರಾಟ ಸಮಿತಿ ಎಚ್ಚರಿಸಿದೆ.
ಕಳೆದ ಕೆಲವು ದಿನಗಳಿಂದ ವಾಮಂಜೂರಿನಲ್ಲಿ ಅಣಬೆ ಫ್ಯಾಕ್ಟರಿ ವಿರುದ್ಧ ಶಾಂತಿಯುತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸುವ ಸಲುವಾಗಿ ರಾತ್ರಿ ವೇಳೆ ಫ್ಯಾಕ್ಟರಿಗೆ ಕಲ್ಲೆಸೆದು ಪ್ರತಿಭಟನೆಯ ದಾರಿ ತಪ್ಪಿಸಲು ಯತ್ನಿಸಲಾಗಿತ್ತು. ಈ ವೇಳೆ ಕಲ್ಲೆಸೆದಿದ್ದ ಪ್ರಮುಖ ಆರೋಪಿಗಳಾದ ಗಣೇಶ್ ನೀರುಮಾರ್ಗ ಹಾಗೂ ಇತರ ಮೂವರು ಆರೋಪಿಗಳನ್ನು ಪ್ರತಿಭಟನಾಕಾರರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಈ ಆರೋಪಿಗಳು ಕೆಲವು ಪ್ರಭಾವಿಗಳ ನೆರವಿನಿಂದ ಯಾವುದೇ ಶಿಕ್ಷೆ ಇಲ್ಲದೆ ಹೊರಬಂದಿದ್ದಾರೆ. ಈ ರೀತಿ ತಪ್ಪು ಮಾಡಿಯೂ ಅವರಿಗೆ ನೆರವಾಗುವ ಆ ಪ್ರಭಾವಿಗಳು ಮತ್ತು ಇವರಿಗೆ ಕುಮ್ಮಕ್ಕು ನೀಡಿದವರು ಹಾಗೂ ಅವರ ಹಿಂದಿರುವ ಪ್ರತಿಯೊಬ್ಬರ ಮೇಲೆ ಸರಿಯಾದ ತನಿಖೆಯಾಗಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ. ಆರೋಪಿಗಳ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ವಾಮಂಜೂರು ನಾಗರಿಕರು ವಾಮಂಜೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಖಂಡಿತ ಎಂದು ಹೋರಾಟ ಸಮಿತಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡದೆ ನಿಜವಾದ ಅಪರಾಧಿಗಳು ಹಾಗೂ ಈ ಶಾಂತಿ ಕದಡುವ ಕೃತ್ಯವನ್ನು ಬೆಂಬಲಿಸುವ ಪ್ರಭಾವಿಗಳನ್ನು ಬಂಧಿಸಿ ನ್ಯಾಯೋಚಿತ ಹೋರಾಟಕ್ಕೆ ಅನುವುಮಾಡಿಕೊಡಬೇಕೆಂದು ಹೋರಾಟ ಸಮಿತಿ ಆಗ್ರಹಿಸಿದೆ.