ಸಾಗರ ಸಂರಕ್ಷಣೆ, ಸುಸ್ಥಿರ ಬಳಕೆ ಕಾರ್ಯಾಗಾರ ಸಂಪನ್ನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13.  ಜಲ ಮಾಲಿನ್ಯ ತಡೆಗಟ್ಟುವುದು ನಾಗರೀಕರ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ನಿತ್ಯ ಬಳಸುವ ದಿನಬಳಕೆಯ ಖರೀದಿಗೆ ಮುನ್ನ ಗೃಹಬಳಕೆಗೆ ಮರು ಉಪಯೋಗವಾಗುವ ಬಟ್ಟೆ ಚೀಲಗಳನ್ನು ಬಳಸುವುದು ಅತ್ಯಗತ್ಯ ಎಂದು ಗೋವಾ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ. ಶಾಮಿಲಾ ದಾಸ್ ಮಿಲಾಗ್ರೀಸ್ ಮಾಂಟೇರಿಯೋ ಹೇಳಿದರು.

ಅವರು ಇತ್ತೀಚೆಗೆ ನಗರದ ಎಕ್ಕೂರಿನಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರಿಕಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿಶ್ವ ಸಾಗರಗಳ ದಿನಾಚರಣೆ ಕಾರ್ಯಕ್ರಮದಲ್ಲಿ ‘ಸಾಗರ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ’ ಎಂಬ ವಿಷಯದ ಬಗ್ಗೆ ನಡೆಸಲಾದ ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ಗೋವಾದ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ ಹಿರಿಯ ಪ್ರಧಾನ ವಿಜ್ಞಾನಿ ಡಾ. ಆರ್.ಎ. ಶ್ರೀಪಾದ ಮಾತನಾಡಿ, ಸಾಗರಗಳ ಸುಸ್ಥಿರ ಬಳಕೆಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಸಮುದ್ರವನ್ನೇ ಅವಲಂಬಿಯಾಗಿರುವ ಮೀನುಗಾರರು ತಮ್ಮ ಜೀವನೋಪಾಯಕ್ಕಾಗಿ ಸಮಗ್ರ ಬಳಕೆಯ ಜವಾಬ್ದಾರಿ ವಹಿಸಬೇಕಾಗುತ್ತದೆ ಮತ್ತು ಸಂರಕ್ಷಣೆಯ ಹೊಣೆ ಎಲ್ಲರಲ್ಲೂ ಮೂಡಬೇಕಿದೆ ಎಂದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ. ಮಾತನಾಡಿ, ಈ ರೀತಿಯ ಮಾಹಿತಿ ಕಾರ್ಯಾಗಾರಗಳಲ್ಲಿ ವ್ಯಕ್ತವಾಗುವ ಮಾಹಿತಿಯನ್ನು ಪ್ರತಿಯೊಬ್ಬರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸುವ ಕಾಳಜಿ ತೋರಬೇಕು ಎಂದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ಡಾ. ಎಚ್.ಎನ್. ಆಂಜನಪ್ಪ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಮಾನವನ ಪಾತ್ರ ಅಪಾರವಾದದ್ದು ಮತ್ತು ಸಮುದ್ರದಿಂದ ಸಂಪನ್ಮೂಲಗಳ ಲಭ್ಯತೆಯನ್ನು ಹೆಚ್ಚಿಸಲು ಪ್ರತಿಯೊಬ್ಬರ ಪಾತ್ರವೂ ಮುಖ್ಯ ಎಂದು ಹೇಳಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಟಿ.ಎಸ್. ಅಣ್ಣಪ್ಪಸ್ವಾಮಿ ಮತ್ತು ಡಾ. ಪದ್ಮನಾಭ ಎ. ಉಪಸ್ಥಿತರಿದ್ದರು. ವೇಣುಗೋಪಾಲ್ ಪಿ.ಪಿ., ಶೋಭಾ ಕೆ. ಮತ್ತು ಯಾದವ್ ಶ್ರೀಯಾನ್ ಕಾರ್ಯಗಾರದಲ್ಲಿ ಹಾಜರಿದ್ದರು. 

Also Read  ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top