ಬಿಪೊರ್ ಜಾಯ್ ಚಂಡಮಾರುತ ➤ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 08. ಬಿಪೊರ್ ಜಾಯ್ ಚಂಡಮಾರುತದ ಪರಿಣಾಮ ಇದೇ ಜೂನ್ 11ರವರೆಗೆ ಮುಂದುವರಿಯಲಿರುವ ಕಾರಣ ಹಾಗೂ ಇದೇ ವೇಳೆಯಲ್ಲಿ ಮುಂಗಾರು ಆರಂಭವಾಗಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಮಾನವ ಹಾಗೂ ಜಾನುವಾರುಗಳ ಪ್ರಾಣಹಾನಿಯಾಗದಂತೆ ಕಟ್ಟೆಚ್ಚರ ವಹಿಸುವಂತೆ ರಾಜ್ಯ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ಅವರಿಗೆ ನಿರ್ದೇಶನ ನೀಡಿದರು.

ಅವರು ಬುಧವಾರದಂದು ಸಂಭಾವ್ಯ ಪ್ರತಿಕೂಲ ಪರಿಸ್ಥಿತಿಯ (ಚಂಡಮಾರುತ) ಪೂರ್ವ ಸಿದ್ಧತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರಿನಿಂದ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಈ ನಿರ್ದೇಶನ ನೀಡಿದರು. ಕರಾವಳಿಯಲ್ಲಿ ಆಳ ಮೀನುಗಾರಿಕೆ ಸೇರಿದಂತೆ ಮೀನುಗಾರಿಕೆ ಹಾಗೂ ಪ್ರವಾಸಿ ತಾಣಗಳಲ್ಲಿ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು, ಬೀಚ್‍ಗಳಲ್ಲಿ ಹೋಂ ಗಾರ್ಡ್ ಗಳನ್ನು ಯೋಜಿಸಬೇಕು, ಬಿಪೊರ್ ಜಾಯ್ ಹಿನ್ನಲೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಅತ್ಯಂತ ಎಚ್ಚರ ವಹಿಸಬೇಕು, ಚಂಡಮಾರುತವು 60 ಕಿಲೋ ಮೀಟರ್‍ ಗೂ ಹೆಚ್ಚಿನ ವೇಗದಲ್ಲಿ ಅಪ್ಪಳಿಸುತ್ತಿದೆ, ಕಡಲ ತೀರಗಳಲ್ಲಿ ಪ್ರವಾಸಕ್ಕೆ ಅವಕಾಶ ನೀಡಬಾರದು. ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ತಂಡಕ್ಕೆ ಅಗತ್ಯವಿರುವ ವಸತಿ, ಸಾರಿಗೆ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು.

Also Read  'ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್' ಗೆ ಕು. ಕ್ಲಾರಿಸ್ಸಾ ಏಂಜಲ್ ಮೊಂತೆರೋ ಆಯ್ಕೆ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದೆ, ಗಾಳಿ, ಮಿಂಚು, ಗುಡುಗು ಇತ್ಯಾದಿಗಳಿಂದ ಯಾವುದೇ ರೀತಿಯ ಹಾನಿಯಾದ ಸಂದರ್ಭದಲ್ಲಿ ಕೂಡಲೇ ಸಂಬಂಧಿಸಿದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವರು, ಮುಖ್ಯವಾಗಿ ಸಾರ್ವಜನಿಕರಿಗೆ ಹವಾಮಾನದ ಮಾಹಿತಿಗಳನ್ನು ಸಕಾಲದಲ್ಲಿ ನೀಡಲಾಗುತ್ತಿದೆ. ಅರಣ್ಯ, ಅಗ್ನಿಶಾಮಕದಳ, ಮೆಸ್ಕಾಂ ಸೇರಿದಂತೆ ಅಗತ್ಯ ಇಲಾಖೆಗಳಲ್ಲಿ ಸಿಬ್ಬಂದಿಗಳು ಯಾವುದೇ ಸ್ಥಿತಿಯನ್ನು ಎದುರಿಸಲು ಸನ್ನದ್ದಗೊಂಡಿವೆ, ಎಸ್‍ಡಿಆರ್‍ಎಫ್ ನ 100 ಸಿಬ್ಬಂದಿಗಳ ತಂಡ ಸಿದ್ದವಿದ್ದು, ತಾಲೀಮು ನಡೆಸುತ್ತಿದೆ. ಎನ್‍ಡಿಆರ್‍ಎಫ್ ಜಿಲ್ಲೆಗೆ ಆಗಮಿಸುತ್ತಿದ್ದು, ವಸತಿ, ಸಾರಿಗೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಒದಗಿಸಿಕೊಡಲಾಗುವುದು ಹಾಗೂ ಎರಡೂ ತಂಡಗಳೊಂದಿಗೆ ಸಭೆಯನ್ನು ನೆಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು. ಹಿಂದಿನ ಅನುಭವದ ಆಧಾರದಂತೆ ಈ ಹಿಂದೆ ಭಾದಿತ ಪ್ರದೇಶಗಳಿಗೆ ತಂಡವು ತೆರಳಿ ಅಲ್ಲಿ ರಕ್ಷಿಸಲು ಕ್ರಮ ಕೈಗೊಳ್ಳಲಿದೆ. ಮುಖ್ಯವಾಗಿ ಅಲ್ಲಿ ಸ್ಥಳೀಯರನ್ನೊಳಗೊಂಡ ಯುವ ಪಡೆಯನ್ನು ಸಿದ್ಧಗೊಳಿಸಲಾಗಿದೆ. ಅವರ ಪಟ್ಟಿ ಸಿದ್ದಪಡಿಸಿದ್ದು, ಅವರ ಮೊಬೈಲ್ ನಂಬರ್ ಪಡೆಯಲಾಗಿದೆ, ಈಗಾಗಲೇ ಅವರೊಂದಿಗೆ ಸಭೆಯನ್ನು ನಡೆಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಮನೆಗಳಿಗೆ ಹಾವು ನುಗ್ಗುವ ಕಾರಣ ಹಾವುಗಳನ್ನು ಹಿಡಿಯುವವರ ಮೊಬೈಲ್ ನಂಬರ್‍ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ, ಜಿಲ್ಲೆಯಲ್ಲಿ 92 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಹಾಸ್ಟೆಲ್, ಶಾಲೆ, ಸಮುದಾಯ ಭವನಗಳಾಗಿರುವ ಕಾರಣ ಅಲ್ಲಿ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಕರಾವಳಿ ಕವಲು ಪಡೆ, ಇಂಡಿಯನ್ ಕೋಸ್ಟ್‍ ಗಾರ್ಡ್, ಲೋಕೋಪಯೋಗಿ ಇಲಾಖೆ, ಎಂಜಿನಿಯರಿಂಗ್ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳು ಸನ್ನದ್ದವಾಗಿರುವಂತೆ ರಶ್ಮಿ ಮಹೇಶ್ ಅವರು ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ವೈ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Also Read  ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಶ - ದಂಡ ವಸೂಲಿ.!

error: Content is protected !!
Scroll to Top