(ನ್ಯೂಸ್ ಕಡಬ) newskadaba.com ವೇಣೂರು, ಜೂ. 07. ಯುವಕನಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 3.30 ಲಕ್ಷ ರೂ. ವಂಚನೆ ಮಾಡಿದ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ.
ವಂಚನೆಗೊಳಗಾದವರನ್ನು ಬೆಳ್ತಂಗಡಿ ತಾಲೂಕಿನ ನಾರಾವಿಯ ಅಟ್ಯಡ್ಕ ನಿವಾಸಿ ಲಿಯೋ ಪಾಯಸ್ ಎಂದು ಗುರುತಿಸಲಾಗಿದೆ. ಲಿಯೋ ಪಾಯಸ್‌ರವರ ಮನೆಗೆ ಆರೋಪಿಗಳಿಬ್ಬರು ಜ. 18ರಂದು ಬಂದು ಅವರ ಪುತ್ರ ಸುರೇಶ್ ಪಾಯಸ್ ಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಾತುಕತೆ ನಡೆಸಿದ ಆರೋಪಿಗಳು 1.25 ಲಕ್ಷ ರೂ. ನಗದು ಪಡೆದು ಬಳಿಕ ವಿವಿಧ ಹಂತಗಳಲ್ಲಿ 1.37 ಲಕ್ಷ ರೂ., 40 ಸಾವಿರ ಹಾಗೂ 28 ಸಾವಿರ ರೂ. ನಗದನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ಆರೋಪಿಗಳು ಸುರೇಶ್ ಪಾಯಸ್ ಗೆ ಮೊಬೈಲ್ ಮೂಲಕ ಬಲ್ಗೇರಿಯಾಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನಕಲಿ ಪ್ರತಿಯನ್ನು ವಾಟ್ಸ್ ಆ್ಯಪ್ ನಲ್ಲಿ ಕಳುಹಿಸಿ ಮುಂಬೈಗೆ ಬರುವಂತೆ ತಿಳಿಸಿದ್ದು, ಅದರಂತೆ ಸುರೇಶ್ ಪಾಯಸ್ ಮುಂಬೈಗೆ ತೆರಳಿದ್ದಾನೆ. ಮುಂಬೈನಲ್ಲಿ ಆತನಿಗೆ ಆರೋಪಿಗಳು ವೀಸಾ ಹಾಗೂ ವಿದೇಶಿ ಕರೆನ್ಸಿ ತರುವುದಾಗಿ ಹೇಳಿ ಹೋದವರು ಹಿಂದಿರುಗದೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಆರೋಪಿಗಳಿಬ್ಬರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.