(ನ್ಯೂಸ್ ಕಡಬ) newskadaba.com ಮಾಣಿ, ಜೂ. 05. ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸರ್ಕಲ್ ಇದರ ವತಿಯಿಂದ ವ್ಯಾಪ್ತಿಯ ಎಲ್ಲಾ ಯುನಿಟ್ ಗಳ ಕಾರ್ಯಕರ್ತರು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಮಾಡಲು ಕರೆ ಕೊಡುವುದರೊಂದಿಗೆ ಶೇರಾ ಬುಡೋಳಿ ಖಿಳ್ರ್ ಜುಮ್ಮಾ ಮಸೀದಿಯ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ನಾಯಕರುಗಳಾದ ಶೇರಾ ಇಬ್ರಾಹಿಂ ಹಾಜಿ ಹಾಗೂ ಹಬೀಬ್ ಶೇರಾ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ವೈಎಸ್ ಮಾಣಿ ಸರ್ಕಲ್ ಅದ್ಯಕ್ಷ ಹೈದರ್ ಸಖಾಫಿ ಶೇರಾ ದುಆ ಮಾಡಿದರು. ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಪರಿಸರ ದಿನಾಚರಣೆಯ ಬಗ್ಗೆ ಮದ್ರಸಾ ವಿದ್ಯಾರ್ಥಿಗಳಿಗೆ ವಿಷಯ ಮಂಡಿಸಿ ರಸ್ತೆಗಳ ನಿರ್ಮಾಣ, ಕಟ್ಟಡ ನಿರ್ಮಾಣ ಮುಂತಾದ ಕಾರಣಗಳಿಗಾಗಿ ಇಂದು ಮರ ಗಿಡಗಳನ್ನು ಕತ್ತರಿಸಿ ಪರಿಸರವನ್ನು ಹಾಳು ಮಾಡಿರುವುದರಿಂದ ಪ್ರಕೃತಿಯ ತಂಪಾದ ಗಾಳಿ ನೆರಳು ಲಭಿಸದೇ ಎ.ಸಿ, ಕೂಲರ್ ಮತ್ತು ಫ್ಯಾನ್ ಮುಂತಾದ ಯಂತ್ರಗಳ ಮೊರೆ ಹೋಗಿ ನೆಮ್ಮದಿ ಸಿಗದೇ ಮನುಷ್ಯ ಚಡಪಡಿಸುತ್ತಿರುವುದು ಕಾಣಬಹುದಾಗಿದೆ. ಆದುದರಿಂದ ಹಳೆಯ ಸನ್ನಿವೇಶಗಳನ್ನು ಮತ್ತೆ ಉಂಟು ಮಾಡಲು ಗಿಡಗಳನ್ನು ನೆಡುತ್ತಾ ತಂಪಾದ ಗಾಳಿ ನೆರಳು ಪಡೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು. ಪರಿಸರ ದಿನಾಚರಣೆಯ ಪ್ರಯುಕ್ತ ಮದ್ರಸಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.