(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.18. ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ಹರಾಜು ನೀತಿ ಅವೈಜ್ಞಾನಿಕ ಹಾಗೂ ಅವಾಸ್ತವಿಕವಾಗಿದೆ’ ಎಂದು ಕಿಡಿ ಕಾರಿರುವ ಹೈಕೋರ್ಟ್, ಇಂದಿರಾ ಕ್ಯಾಂಟೀನ್ ರೀತಿಯಲ್ಲಿ ಮರಳನ್ನು ವಿತರಿಸಲು ಸೂಚನೆ ನೀಡಿದೆ.
ಸರ್ಕಾರದ ವತಿಯಿಂದ ನಡೆಸಿದ್ದ ಮರಳು ಹರಾಜು ಪ್ರಕ್ರಿಯೆಯಲ್ಲಿ ‘ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಲಾಗಿದ್ದರೂ ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಆರೋಪಿಸಿ ಹಾವೇರಿಯ ವನಜಾಕ್ಷಿ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಮರಳು ನೀತಿಯನ್ನು ತರಾಟೆಗೆ ತೆಗೆದುಕೊಂಡು, ‘ಸರ್ಕಾರಕ್ಕೆ ಇಲಾಖೆಯನ್ನು ನಡೆಸುವುದು ಗೊತ್ತಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿತು. ನಿಜವಾಗಿಯೂ ಎಲ್ಲರಿಗೂ ಮರಳು ಸಿಗಬೇಕು ಎಂಬ ಸದುದ್ದೇಶ ಸರ್ಕಾರಕ್ಕೆ ಇದ್ದರೆ ಇಂದಿರಾ ಕ್ಯಾಂಟೀನ್ ಹಾಗೂ ನ್ಯಾಯಬೆಲೆ ಅಂಗಡಿ ಮಾದರಿಯಲ್ಲಿ ಡಿಪೊ ಆರಂಭಿಸಿ ಮರಳು ವಿತರಣೆ ಮಾಡಿ’ ಎಂದು ನ್ಯಾಯಪೀಠ ಸಲಹೆ ನೀಡಿತು.