(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ,ಮೇ.19 ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಳಿಕ ಗುರುವಾರ ಬೆಳ್ಳಂಬೆಳಗ್ಗೆ ತಾಲ್ಲೂಕಿನ ಮೈಲಪ್ಪನಹಳ್ಳಿಗೆ ಅಧಿಕಾರಿಗಳೊಂದಿಗೆ ತೆರಳಿದ ಪ್ರದೀಪ್ ಈಶ್ವರ್, ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಚುನಾವಣೆಯ ಫಲಿತಾಂಶದ ನಂತರ ಇಡೀ ಕ್ಷೇತ್ರದ ಪ್ರತಿ ಮನೆಗೆ ಭೇಟಿ ನೀಡಿ ಕಷ್ಟಸುಖ ವಿಚಾರಿಸುತ್ತೇನೆ ಎಂದು ಭರವಸೆ ನೀಡಿದ್ದರಿಂದ “ನಮಸ್ತೆ ಚಿಕ್ಕಬಳ್ಳಾಪುರ” ಎಂಬ ಕಾರ್ಯಕ್ರಮದಡಿ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಮನೆಗೆ ತೆರಳಿ ಸಮಸ್ಯೆಯನ್ನು ಆಲಿಸಿ ಪರಿಹರಿಸಲಿದ್ದೇನೆ ಎಂದು ಹೇಳಿದರು.