(ನ್ಯೂಸ್ ಕಡಬ) newskadaba.com. ಉತ್ತರಪ್ರದೇಶ, ಮೇ.12. ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಜೋಡಿಯನ್ನು ಯುವತಿಯ ಕಡೆಯವರು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ವರದಿಯಾಗಿದೆ.
ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಠಾಕೂರ್ ಸಮುದಾಯಕ್ಕೆ ಸೇರಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೂ ದಲಿತ ಸಮುದಾಯಕ್ಕೆ ಸೇರಿದ್ದ 19ವರ್ಷ ಪ್ರಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ತಮ್ಮ ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿರುವ ವಿಚಾರ ತಿಳಿದ ಪೋಷಕರು ಜೋಡಿಗೆ ಹುಡುಕಾಟ ನಡೆಸಿದ್ದಾರೆ.
ಖಾಯಂಪುರ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದು ಕೂಡಲೇ ಕುಟುಂಬದ ಇತರ ಸದಸ್ಯರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ ಬಾಲಕಿ ಪೋಷಕರು ಜೋಡಿಯನ್ನು ಹತ್ಯೆ ಮಾಡಿ ಮಾವಿನ ಮರಕ್ಕೆ ನೇಣು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸಿವಾನ್ ಪೊಲೀಸ್ ಠಾಣಾಧಿಕಾರಿ ಅಖಿಲೇಶ್ ತಿವಾರಿ, ಘಟನೆ ನಡೆದ ಹಿಂದಿನ ದಿನ ಮೃತ ಬಾಲಕಿಯ ತಂದೆ ತಮ್ಮ ಮಗಳನ್ನು ಯುವಕನೊಬ್ಬ ಅಪಹರಣ ಮಾಡಿದ್ಧಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಮಂಗಳವಾರ ಬೆಳಗ್ಗೆ ಯುವಕನ ತಂದೆ ಬಾಲಕಿಯ ಕುಟುಂಬಸ್ಥರ ವಿರುದ್ಧ ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಮಗಳು ಕೆಲ ಜಾತಿಯ ಯುವಕನನ್ನು ವರಿಸಿದ ಕಾರಣ ಮರ್ಯಾದೆಗೆ ಅಂಜಿ ಕೃತ್ಯ ಎಸಗಿರಿವುದಾಗಿ ಹೇಳಿದ್ದಾರೆ.
ಮೊದಲಿಗೆ ದಂಪತಿಗಳಿಬ್ಬರನ್ನು ಕೊಂದು ಆ ನಂತರ ಅವರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಅವರ ಹೆಣಗಳನ್ನು ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲಾಯಿತು ಎಂದು ಬಾಲಕಿಯ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.