ನಕಲಿ ಸಮೀಕ್ಷೆಯ ಮೂಲಕ ಕಾಂಗ್ರೆಸ್ ಹೆಸರು ದುರುಪಯೋಗ ಆರೋಪ ► ಸಿಎಚ್ಎಸ್ ಸರ್ವೇಶ್ ಸಂಸ್ಥೆಯ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.16. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಿಎಚ್‍ಎಸ್ ಸರ್ವೇಶ್ ಸಂಸ್ಥೆಯವರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ರಾಜ್ಯದ ಜನತೆ ವಿಧಾನಸಭೆ ಚುನಾವಣೆಗಳ ಕುರಿತು ಲೆಕ್ಕಾಚಾರ ಮಾಡುತ್ತಿರುವ ಈ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಸಮೀಕ್ಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಜನರಲ್ಲಿ ತಪ್ಪು ಗ್ರಹಿಕೆ ಮೂಡಿಸುವ ಅನೈತಿಕ ಮಾರ್ಗ ಹಿಡಿದಿವೆ. ಜೆಪಿ ನಗರ, ಡಾಲರ್ಸ್ ಕಾಲೋನಿಯ ದೀಪಕ್ ಅವಸ್ಥಿ ಅವರ ನೇತೃತ್ವದ ಸಿಎಚ್‍ಎಸ್ ಸರ್ವೇಶ್ ಸಂಸ್ಥೆಯು ಜ.5ರಂದು ಸರ್ವೆ ರಿಪೋರ್ಟ್ ಫಾರ್ ದ ಮಂತ್ ಆಫ್ ಡಿಸೆಂಬರ್ ಎಂಬ ಶೀರ್ಷಿಕೆಯಡಿ ಚುನಾವಣಾ ಸಮೀಕ್ಷೆಯನ್ನು ಪ್ರಕಟಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಚನೆಯಂತೆ ಈ ಸಮೀಕ್ಷೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಿದ್ದು, ಕಾಂಗ್ರೆಸ್‍ನ ಜನಪ್ರಿಯತೆ ಕುಗ್ಗಿಸಲು ಹುನ್ನಾರ ನಡೆಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 76 ಸ್ಥಾನಗಳನ್ನು ಪಡೆಯಲಿದೆ ಎಂಬ ನಕಲಿ ಸಮೀಕ್ಷೆ ವರದಿ ಪ್ರಕಟಿಸಲಾಗಿದೆ.

Also Read  ಸ್ವಿಫ್ಟ್ ಕಾರು -​​ಲಾರಿ ನಡುವೆ ಭೀಕರ ಅಪಘಾತ ➤ ಮೂವರು ಸ್ಥಳದಲ್ಲೇ ಮೃತ್ಯು

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊರಕುತ್ತಿರುವ ಅಭೂತಪೂರ್ವ ಜನಬೆಂಬಲವನ್ನು ದಿಕ್ಕುತಪ್ಪಿಸುವ ದುರುದ್ದೇಶದಿಂದ ಈ ವರದಿಯನ್ನು ಪ್ರಕಟಿಸಲಾಗಿದ್ದು, ಸಮೀಕ್ಷೆ ನಡೆಸಿರುವುದಾಗಿ ಹೇಳಿಕೊಳ್ಳುತ್ತಿರುವ ಸಂಸ್ಥೆಯವರು ಕೆಪಿಸಿಸಿ ಅಧ್ಯಕ್ಷರನ್ನಾಗಲಿ, ಕಾಂಗ್ರೆಸ್ ಘಟಕದ ಪದಾಧಿಕಾರಿಗಳನ್ನಾಗಲಿ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಸಮೀಕ್ಷೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಪರಮೇಶ್ವರ್ ಅವರು ಈಗಾಗಲೇ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸಿಎಚ್‍ಎಸ್ ಸಂಸ್ಥೆ ಬೆಂಗಳೂರಿನ ಜೆಪಿ ನಗರದ ವಿಳಾಸದ ಜತೆಗೆ ಪ್ರಧಾನ ಕಚೇರಿ ಅಮೆರಿಕದಲ್ಲಿರುವುದಾಗಿ ಲೆಟರ್‍ಹೆಡ್‍ನಲ್ಲಿ ನಮೂದಿಸಿಕೊಂಡಿದೆ. ಈ ಸಂಸ್ಥೆ ಜನರಲ್ಲಿ ತಪ್ಪು ಗ್ರಹಿಕೆ ಮೂಡಿಸಲು ಕಾರಣವಾಗುತ್ತಿದೆ. ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸೈಬರ್ ಕ್ರೈಂ ಮೂಲಕ ಸಾಮಾಜಿಕ ವಿಧ್ವಂಸಕರನ್ನು ಪತ್ತೆ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್‍ ಕುಮಾರ್ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ. ರಾಧಾಕೃಷ್ಣ, ಮಾಧ್ಯಮ ಸಂಚಾಲಕ ಎ.ಎನ್. ನಟರಾಜ್‍ಗೌಡ ಅವರು ನೀಡಿದ ದೂರಿನಲ್ಲಿ ಮನವಿ ಮಾಡಲಾಗಿದೆ.

Also Read  ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಶವಾದ್ ಗೂನಡ್ಕರವರಿಗೆ ಹುಟ್ಟೂರ ಸನ್ಮಾನ

error: Content is protected !!
Scroll to Top