ಮಂಗಳೂರು: ಜ.16 ರಂದು ಬಡವರಿಗೆ‌ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.14. ಮಂಗಳೂರು ಮಹಾನಗರದಲ್ಲಿ ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲಾಟ್ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿಕೊಡಲು ಮಹಾನಗರಪಾಲಿಕೆ ಮುಂದಾಗಿದ್ದು, ಮಂಗಳವಾರ(ಜ.16) ಮಂಗಳೂರು ಪುರಭವನದಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್‍ಗಳ ಹಂಚಿಕೆಯಾಗಲಿದೆ.

ಹಲವು ವರ್ಷಗಳ ಬಳಿಕ ನಗರ ಮಂಗಳೂರು ಮಹಾನಗರದಲ್ಲಿ ಬಡವರಿಗೆ ಬೃಹತ್ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಜಾರಿಗೆ ಬರುತ್ತಿದೆ. ನಗರದಲ್ಲಿ ಮನೆಗಳಿಗಾಗಿ ವಸತಿ ರಹಿತರಿಂದ ಮನೆಗಳಿಗಾಗಿ ಸಾಕಷ್ಟು ಬೇಡಿಕೆಯಿದ್ದು, ನಗರ ವ್ಯಾಪ್ತಿಯಲ್ಲಿ ಜಾಗದ ಸಮಸ್ಯೆಯಿಂದ ವಸತಿ ಯೋಜನೆಗೆ ತೀವ್ರ ಅಡ್ಡಿಯಾಗಿತ್ತು. ಆದರೆ ಅಪಾರ್ಟ್‍ಮೆಂಟ್‍ಗಳ ಮಾದರಿಯಲ್ಲಿ ಮನೆ ನಿರ್ಮಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮನೆ ನಿರ್ಮಿಸಬಹುದಲ್ಲದೇ, ಜಾಗದ ಸಮಸ್ಯೆಗೂ ಪರಿಹಾರ ದೊರಕುವುದನ್ನು ಮನಗಂಡು ಮಂಗಳೂರು ಮಹಾನಗರಪಾಲಿಕೆ ಅಪಾರ್ಟ್‍ಮೆಂಟ್‍ಗಳ ಮಾದರಿಯಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿತ್ತು. ಇದಕ್ಕೆ ಸರಕಾರದ ಅನುಮೋದನೆಯೂ ದೊರಕಿದ್ದು, ಮಹಾನಗರದಲ್ಲಿ ವಸತಿ ರಹಿತ ಬಡವರ ಸ್ವಂತ ಮನೆ‌ ಹೊಂದುವ ದೀರ್ಘಕಾಲದ ಕನಸು ಈಡೇರುವ ಹಂತಕ್ಕೆ ಬಂದಿದೆ. ಅದೂ ಕೂಡಾ ಫ್ಲಾಟ್‍ಗಳೆಂದರೆ ಶ್ರೀಮಂತರಿಗೆ ಮಾತ್ರ ಎಂಬ ಪರಿಕಲ್ಪನೆಯ ಈ ಕಾಲದಲ್ಲಿ ಬಡವರೂ ಫ್ಲಾಟ್‍ನ ಮಾಲಕರಾಗುತ್ತಿದ್ದಾರೆ.

Also Read  'ಮಂಗಳೂರು ಚಲೋ' ಬೈಕ್ ರಾಲಿ ಮೇಲೆ ಸಿಎಂ ಕೆಂಗಣ್ಣು ► ರಾಲಿ ತಡೆಗೆ ಕಾಂಗ್ರೆಸ್ ನಾಯಕರಿಂದ ಮುಖ್ಯಮಂತ್ರಿಗೆ ದೂರು

ಈ ಯೋಜನೆಯ ಮೊದಲ ಹಂತವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಶಕ್ತಿನಗರ ಸಮೀಪದ ರಾಜೀವನಗರದ 10 ಎಕರೆ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ( ನೆಲಮಹಡಿ ಹಾಗೂ 3 ಮಹಡಿಗಳ ಅಪಾರ್ಟ್‍ಮೆಂಟ್) ಸುಮಾರು 930 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮೋದನೆ ನೀಡಿದೆ. ಪ್ರತಿಯೊಂದು ಫ್ಲಾಟ್‍ನ ನಿರ್ಮಾಣ ವೆಚ್ಚ ರೂ. 5 ಲಕ್ಷಗಳಾಗಿದ್ದು, ಈ ಯೋಜನೆಗೆ ಅವಶ್ಯವಿರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರಕಾರ, ಮಹಾನಗರಪಾಲಿಕೆ ನಿಧಿ, ಫಲಾನುಭವಿಗಳ ವಂತಿಗೆ ಹಾಗೂ ಫಲಾನುಭವಿಗಳ ಬ್ಯಾಂಕ್ ಸಾಲದಿಂದ ಹೊಂದಿಸಲಾಗುತ್ತದೆ. ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಲು ಅವರಿಗೆ ಹಂಚಿಕೆ ಮಾಡುವ ನಿರ್ದಿಷ್ಟ ಫ್ಲಾಟ್ ಸಂಖ್ಯೆ ಅಗತ್ಯವಾಗಿ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್‍ಗಳನ್ನು ಆಯ್ಕೆ ಮಾಡಿ, ಹಂಚಿಕೆ ಮಾಡಲಾಗುವುದು. ಫ್ಲಾಟ್ ಸಂಖ್ಯೆ ಹಂಚಿಕೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಜನವರಿ 16 ರಂದು ಬೆಳಿಗ್ಗೆ 11 ಗಂಟೆಗೆ ಪುರಭವನದಲ್ಲಿ ಸಾರ್ವಜನಿಕವಾಗಿಯೇ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Also Read  ಮಂಗಳೂರು ವಿವಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ➤ ತನಿಖಾ ವರದಿ ಮುಚ್ಚಿಟ್ಟು ಎಡವಟ್ಟು!

error: Content is protected !!
Scroll to Top