(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.05 ದ್ವಿತೀಯ ಪಿಯು ಬಳಿಕ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ‘ನೀಟ್’ ಇದೇ 7ರಂದು (ಭಾನುವಾರ) ನಡೆಯಲಿದೆ. ರಾಜಕೀಯ ಪಕ್ಷಗಳು ಅದೇ ದಿನ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನೂ ವಿವಿಧೆಡೆ ಆಯೋಜಿಸಿವೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನಿಷ್ಠ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರ- ಪಟ್ಟಣಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಶೇಷ ಭದ್ರತಾ ವ್ಯವಸ್ಥೆ ಇರುವ ರಾಜಕೀಯ ನೇತಾರರ ರೋಡ್ ಶೋ, ಪ್ರಚಾರ ಸಭೆ, ರ್‍ಯಾಲಿ ಇದೇ ಸಮಯದಲ್ಲಿ ನಡೆಯಲಿವೆ. ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲು ನಾಯಕರು ಸಾಗುವ ಮಾರ್ಗಗಳನ್ನು ಸಾಮಾನ್ಯವಾಗಿ ಮೂರ್ನಾಲ್ಕು ಗಂಟೆ ಮೊದಲೇ ಬಂದ್ ಮಾಡಲಾಗುತ್ತದೆ. ಪರೀಕ್ಷೆ ಎದುರಿಸುವ ಸವಾಲನ್ನು ಒಡಲೊಳಗೆ ಇಟ್ಟುಕೊಂಡ ಮಕ್ಕಳು, ಈ ಅಡೆತಡೆಗಳನ್ನು ದಾಟಿ ಪರೀಕ್ಷಾ ಕೇಂದ್ರಗಳನ್ನು ಮುಟ್ಟುವುದಕ್ಕೆ ಕಷ್ಟ ಪಡಬೇಕಾಗುತ್ತದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.