ಧರ್ಮಸ್ಥಳದಲ್ಲಿ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ➤ 201 ಜೋಡಿ ವಧು-ವರರು ಹೊಸ ಜೀವನಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com, ಉಜಿರೆ , ಮೇ 04.  ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ ಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

  • ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದ, ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಲಸೂತ್ರಧಾರಣೆ ಮಾಡಿ, ಆಯಾ ಜಾತಿ ಸಂಪ್ರದಾಯದಂತೆ ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ಮದುವೆಯ ವಿವರ: ಅಂತರ್ಜಾತಿ ವಿವಾಹ: 52, ಪರಿಶಿಷ್ಟ ಜಾತಿ: 52, ಕುರುಬ:9, ವೀರಶೈವರು:9, ಪರಿಶಿಷ್ಟ ವರ್ಗ:11 ಉಳಿದ 68 ಜೊತೆ ಇತರ ಜಾತಿಗೆ ಸೇರಿದವರು.ಕೇರಳದಿಂದ ಮೂರು ಜೊತೆ ಹಾಗೂ ಆಂಧ್ರಪ್ರದೇಶದ ಒಂದು ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾದರು.

ನೂತನ ದಂಪತಿಗಳು ಪರಸ್ಪರ ಹೊಂದಾಣಿಕೆಯೊಂದಿಗೆ ಸಹನೆ, ತಾಳ್ಮೆಯಿಂದ ಸಾರ್ಥಕ ಜೀವನ ನಡೆಸಿ : ಡಿ. ವೀರೇಂದ್ರ ಹೆಗ್ಗಡೆ

Also Read  ಆಟೋದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ..!

ಮದುವೆಯಾಗಿ ಬಂದ ಗೃಹಿಣಿ ಭಾಗ್ಯಲಕ್ಷ್ಮಿಯಾಗಿ ಮನೆಯನ್ನೇ ಬೆಳಗಿ ಸ್ವರ್ಗವನ್ನಾಗಿ ಮಾಡುತ್ತಾಳೆ. ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ-ಕಷ್ಟವನ್ನು ಸಮಾನವಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಸ್ವರ್ಗ ಸುಖವನ್ನು ಅನುಭವಿಸಬಹುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು. ಸಾಮೂಹಿಕ ವಿವಾಹ ಸರಳವಾಗಿ ಕಡಿಮೆ ವೆಚ್ಚದಲ್ಲಿ ನಡೆಯುತ್ತದೆ. ಆದರೆ ಅಲ್ಪ ಅಲ್ಲ ಎಂದು ಹೆಗ್ಗಡೆಯವರು ಸ್ಪಷ್ಟಪಡಿಸಿದರು.

ಮದುವೆಗಾಗಿ ದುಂದುವೆಚ್ಚ ಮಾಡಬಾರದು. ನಿಶ್ಚಿತಾರ್ಥ, ಮೆಹೆಂದಿ ಮೊದಲಾದ ಕಾರ್ಯಕ್ರಮಗಳಿಗೂ ದುಂದುವೆಚ್ಚ ಮಾಡದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರಲ್ಲಿ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಸಾಮೂಹಿಕ ವಿವಾಹವನ್ನು ವೈಭವೀಕರಿಸುವುದಕ್ಕಾಗಿ ಚಲನಚಿತ್ರ ನಟ ದರ್ಶನ್ ತೂಗುದೀಪ್ ಅವರನ್ನು ಆಹ್ವಾನಿಸಲಾಗಿದೆ. ತಾನು ಕೂಡಾ ಅವರ ಅಭಿಮಾನಿಯಾಗಿದ್ದು ಅವರ ಮಾನವೀಯತೆ ಸೇವಾ ಕಳಕಳಿ, ಪರಿಸರ ಪ್ರೇಮ, ಪ್ರಾಣಿ-ಪಕ್ಷಿಗಳ ಬಗ್ಗೆ ಒಲವು ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು.

Also Read  ಗ್ರಾ.ಪಂ. ಉಪಚುನಾವಣಾ ಫಲಿತಾಂಶ ಪ್ರಕಟ- ಗೆದ್ದುಬೀಗಿದ ಪುತ್ತಿಲ ಪರಿವಾರ

ಶುಭಾಶಂಸನೆ ಮಾಡಿ ಮಾತನಾಡಿದ ಚಲನಚಿತ್ರ ನಟ ದರ್ಶನ್ ತೂಗುದೀಪ್ ತಾನು ಕೂಡಾ ಧರ್ಮಸ್ಥಳದಲ್ಲೇ ಮದುವೆಯಾಗಿರುವುದನ್ನು ಸ್ಮರಿಸಿದರು. ಪೂಜ್ಯ ಹೆಗ್ಗಡೆಯವರ ಆಶೀರ್ವಾದದಿಂದ ತಾನು ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ನೂತನ ದಂಪತಿಗಳು ಪರಸ್ಪರ ಅರಿತುಕೊಂಡು, ಗೌರವಿಸಿ, ಪ್ರೀತಿ ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್. ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್ ಮತ್ತು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ದಿವ್ಯ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.

 

error: Content is protected !!
Scroll to Top