ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

(ನ್ಯೂಸ್ ಕಡಬ) newskadaba.com. ರಾಮನಗರ,ಮೇ.3. ಬೊಂಬೆನಗರಿ ಚನ್ನಪಟ್ಟಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ‌. ದೇವೇಗೌಡ ಆಗಮಿಸಿ ಎರಡನೇ ಬಾರಿಗೆ ಹೆಚ್.ಡಿ.

ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ನಗರದ ಶೇರು ಸರ್ಕಲ್​ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡ್ತೇನೆ ಎಂದು ಹೇಳುವ ವ್ಯಕ್ತಿ ಇದ್ರೆ ಅದು ಕುಮಾರಸ್ವಾಮಿ ಎಂದರು.

ಹಿಂದೂಸ್ಥಾನದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಯಾರಾದ್ರು ಇದ್ರೆ ಅದು ಕುಮಾರಸ್ವಾಮಿ ಮಾತ್ರ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್‌ನವರ ವ್ಯಂಗ್ಯದ ನಡುವೆ ಸಾಲ‌ಮನ್ನಾ ಮಾಡಿದ್ದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗ್ತಾರೆ. ಈ ದೇಶದಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ರೆ ಅದು ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯವಾಗಿದೆ ಎಂದು ಮಗನನ್ನು ಕೊಂಡಾಡಿದರು.

Also Read  'ಮೋದಿಯನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ'       ➤ ಖರ್ಗೆಗೆ ಈಶ್ವರಪ್ಪ ತಿರುಗೇಟು

ಸಿದ್ದರಾಮಯ್ಯ ಐವತ್ತು ಸಾವಿರ ಸಾಲ‌ ಮನ್ನಾ ಮಾಡಿದ್ದರೂ 3500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು, ಇಡೀ ಹಿಂದೂಸ್ಥಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್ ಬಿಜೆಪಿಯವ್ರು ನನ್ನ ಮುಂದೆ ನಿಂತು ಹೇಳಲಿ ಎಂದು ಸವಾಲು ಹಾಕಿದರು. ಇದಲ್ಲದೆ ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದ್ರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದ್ರು. ಮುಸ್ಲಿಂ ಮೀಸಲಾತಿ ಕೊಟ್ಟಿದ್ದು ಯಾರು? ಮುಸ್ಲಿಂ ವಸತಿ ಶಾಲೆಗಳನ್ನು ಕೊಟ್ಟಿದ್ದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗಳಿಗೆ ಸೇರಿಸಿ ಹಾಳು ಮಾಡಿದ್ದರು. 13 ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವವರು ಉತ್ಸಾಹ ತೋರಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಕಾಲೆಳೆದರು.

ಜೆಡಿಎಸ್​ಗೆ ವೋಟ್ ಹಾಕಿದ್ರೆ ಅದು ಕಾಂಗ್ರೆಸ್​ಗೆ ವೋಟ್ ಹಾಕಿದಂತೆ ಎಂಬ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಕಾಂಗ್ರೆಸ್ ಇಬ್ರೂ ದಾಯಾದಿಗಳ ಮಕ್ಕಳು. ಜನಕ್ಕೆ ಎಲ್ಲವೂ ಗೊತ್ತಾಗುತ್ತೆ. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಕನ್ನಡ ನಾಡಿನ ಮಕ್ಕಳು. ಕನ್ನಡಿಗರ ಉಳಿಯಬೇಕು ಎಂದು ದೇವೇಗೌಡ ಹೇಳಿದ್ರು.

error: Content is protected !!
Scroll to Top