ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಮರ ಬಿದ್ದ ಪರಿಣಾಮ ಶಿಕ್ಷಕ ದಾರುಣ ಅಂತ್ಯ

(ನ್ಯೂಸ್ ಕಡಬ) newskadaba.com. ವಿಜಯಪುರ, ಮೇ.1. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಮಟ್ಟಿ ಮುಖ್ಯ ರಸ್ತೆಯ ಹುಲ್ಲೂರ ಗ್ರಾಮದ ಹಳ್ಳದ ಹತ್ತಿರ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸವಾರನ ಮೇಲೆ ಮರವೊಂದು ಮುರಿದು ಬಿದ್ದು ಸವಾರ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಕಲಾವಿದರೂ ಆಗಿದ್ದ ಶಿಕ್ಷಕ ಪ್ರಕಾಶ‌ ವೀರಭದ್ರಪ್ಪ ಛಲವಾದಿ (35) ಸಾವನ್ನಪ್ಪಿರುವವರು.

ಬಾಗಲಕೋಟೆ ಜಮಖಂಡಿ ತಾಲೂಕು ಚಿಮ್ಮಡ ಗ್ರಾಮದವರಾಗಿದ್ದ ವೀರಭದ್ರಪ್ಪ ಅವರು ನಿಡಗುಂದಿಯಲ್ಲಿ ಮನೆ ಮಾಡಿ‌ ಕುಟುಂಬ ಸಮೇತರಾಗಿ ವಾಸವಿದ್ದರು. ಮುದ್ದೇಬಿಹಾಳ ತಾಲೂಕು ಸಿದ್ದಾಪೂರ ಪಿಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದು ಪ್ರಭಾರಿ ಮುಖ್ಯಾಧ್ಯಾಪಕರಾಗಿಯೂ ಜವಾಬ್ಧಾರಿ ನಿರ್ವಹಿಸುತ್ತಿದ್ದರು.

ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ರವಿವಾರ ಬೆಳಗ್ಗೆ ಗ್ರಾಮದಲ್ಲಿ ನಡೆದ ನಮ್ಮ‌ ಮತ‌ ನಮ್ಮ ಹಕ್ಕು ಅಭಿಯಾನದಲ್ಲಿ ಪಾಲ್ಗೊಂಡಿದ್ದ ವೀರಭದ್ರಪ್ಪ ಅವರು, ಮಧ್ಯಾಹ್ನ ಮುದ್ದೇಬಿಹಾಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಂಜೆ ಜೋರಾಗಿ ಗಾಳಿ ಬೀಸುತ್ತಿದ್ದರೂ ಕೂಡಾ ಲೆಕ್ಕಿಸದೆ ಬೈಕ್ ಮೇಲೆ ನಿಡಗುಂದಿಗೆ ಹೊರಟಾಗ ಜೋರಾದ ಗಾಳಿಗೆ ಬೇವಿನ‌ ಮರ ಮುರಿದು ಇವರ ಮೇಲೆ ಬಿದ್ದಿದೆ. ಮರದಡಿಯಲ್ಲಿ ಸಿಲುಕಿಕೊಂಡ ಶಿಕ್ಷಕ ಪ್ರಕಾಶ‌ ವೀರಭದ್ರಪ್ಪ ಛಲವಾದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

Also Read  3.16 ಲಕ್ಷ ರೂ. ಮೌಲ್ಯದ ಗಾಂಜಾ ರೈಲು ನಿಲ್ದಾಣದ ಬಳಿ ಪತ್ತೆ

ಜೋರಾದ ಗಾಳಿ ಮಳೆಯ ಕಾರಣ ಯಾರೂ ಈ ಘಟನೆ ಗಮನಿಸಿರಲಿಲ್ಲ.   ಕಲಾವಿದರೂ, ಗಾಯಕರು, ಸಾಹಿತಿ, ಕವಿ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿದ್ದ ಇವರು ಹಲವು ಕಡೆಗಳಲ್ಲಿ ತಂಡದೊಂದಿಗೆ ವೇದಿಕೆ ಪ್ರದರ್ಶನವನ್ನೂ ನೀಡುತ್ತಿದ್ದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!