51,168 ಮಂದಿ ವಿಶೇಷ ಚೇತನರು, ವೃದ್ಧರಿಂದ ಮನೆಯಿಂದಲೇ ಮತದಾನ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಮೇ.1 ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ದಿವ್ಯಾಂಗರಿಗೆ ಕಲ್ಪಿಸಲಾಗಿರುವ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಎರಡನೇ ದಿನವಾದ ಭಾನುವಾರವು ಮತದಾನ ಮುಂದುವರಿದಿದ್ದು,  ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ವಿಶೇಷ ಮತದಾನದ ಅವಕಾಶವನ್ನು ಕಲ್ಪಿಸಿದೆ.

ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನದ ಪ್ರಕ್ರಿಯೆ ಏಪ್ರಿಲ್ 29 ರಿಂದ ಪ್ರಾರಂಭವಾಗಿದ್ದು, ಮೇ 6 ರಂದು ಕೊನೆಗೊಳ್ಳಲಿದೆ. ಭಾನುವಾರ ರಾಜ್ಯಾದ್ಯಂತ ಒಟ್ಟು 20,049 ದಿವ್ಯಾಂಗರು ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಇದಕ್ಕಾಗಿ 1,270 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೊದಲ ದಿನವಾದ ಶನಿವಾರ ರಾಜ್ಯದಲ್ಲಿ ಒಟ್ಟು 31,119 ಮಂದಿ ಮತ ಹಾಕಿದ್ದರು.

ಶತಾಯುಷಿಯಿಂದ ಮತದಾನ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಅವರು ನಿನ್ನೆ ತಮ್ಮ ಮನೆಯಿಂದಲೇ ಮತ ಚಲಾಯಿಸಿದರು. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿರಿಯ ಮತದಾರರೆನಿಸಿರುವ ಇವರು ಭಾರತ ಚುನಾವಣಾ ಆಯೋಗದ ನೂತನ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜವಾಬ್ದಾರಿಯುತ ಪ್ರಜೆಗಳಾಗಿ ದೇಶದ ಪ್ರತಿ ನಾಗರಿಕರೂ ತಪ್ಪದೇ ಮತ ಚಲಾಯಿಸಬೇಕೆಂದು ಅವರು ಇದೇ ವೇಳೆ ಕರೆ ನೀಡಿದರು.

Also Read  ಬಿಳಿನೆಲೆ: ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನಾಚರಣೆ

ಚುನಾವಣಾಧಿಕಾರಿ ಮನೋಜ್ ಕುಮಾರ್ ಪ್ರತಿಕ್ರಿಯೆ ಮತದಾನ ದೇಶದ ಪ್ರತಿ ನಾಗರಿಕನ ಸಂವಿಧಾನಿಕ ಹಕ್ಕು. ಈ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕೆಂಬ ಉದ್ದೇಶದಿಂದ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಯುವ ಮತದಾರರಿಗೆ ಸ್ಫೂರ್ತಿ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿ 900 ನಾಗರಿಕರಿಂದ ಮತದಾನ: 80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರ ಮತದಾನಕ್ಕೆ ಸಂಬಂಧಿಸಿದಂತೆ 12 ಡಿ ಅರ್ಜಿ ಪಡೆದ 900 ಮಂದಿ ಭಾನುವಾರ ಮತದಾನ ಮಾಡಿದ್ದಾರೆ. ಇದರಲ್ಲಿ 80 ವರ್ಷ ಮೇಲ್ಪಟ್ಟವರು 773 ಮಂದಿ ಹಾಗೂ ವಿಶೇಷಚೇತನರು 127 ಮಂದಿ ಸೇರಿ ಒಟ್ಟು 900 ಮಂದಿ ಮತದಾನ ಮಾಡಿದ್ದಾರೆ.

ಚಾಮರಾಜದಲ್ಲಿ 80 ವರ್ಷ ಮೇಲ್ಪಟ್ಟವರು 101, ವಿಶೇಷಚೇತನರು-1, ಒಟ್ಟಾರೆ 102. ಚಾಮುಂಡೇಶ್ವರಿಯಲ್ಲಿ 80 ವರ್ಷ ಮೇಲ್ಪಟ್ಟವರು 76 ವಿಶೇಷಚೇತನರು 15 ಸೇರಿದಂತೆ ಒಟ್ಟಾರೆ-91 ಮಂದಿ ಮತ ಹಾಕಿದರು. ಎಚ್.ಡಿ.ಕೋಟೆಯಲ್ಲಿ 80 ವರ್ಷ ಮೇಲ್ಪಟ್ಟವರು-21, ವಿಶೇಷಚೇತನರು -14 ಒಟ್ಟಾರೆ 35, ಹುಣಸೂರಿನಲ್ಲಿ 80 ವರ್ಷ ಮೇಲ್ಪಟ್ಟರು -109, ವಿಶೇಷಚೇತನರು -30 ಒಟ್ಟಾರೆ 139 ಜನರಿಂದ ಮತದಾನವಾಗಿದೆ.

Also Read  ಸಾರಿಗೆ ನೌಕರರ ಬೇಡಿಕೆ ಸರ್ಕಾರ ಈಡೇರಿಸದಿದ್ದಲ್ಲಿ ಮುಷ್ಕರಕ್ಕೆ ಸಿದ್ಧರಾಗುವಂತೆ ಸಾರಿಗೆ ಮುಖಂಡ ಕರೆ

ಕೃಷ್ಣರಾಜ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟವರು 133, ವಿಶೇಷಚೇತನರು-2 ಒಟ್ಟಾರೆ-135, ನಂಜನಗೂಡಿನಲ್ಲಿ 80 ವರ್ಷ ಮೇಲ್ಪಟ್ಟವರು 13, ವಿಶೇಷಚೇತನರು-4 ಒಟ್ಟಾರೆ-17, ಎನ್.ಆರ್.ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟವರು-111, ವಿಶೇಷಚೇತನರು -7 ಒಟ್ಟಾರೆ-118, ಪಿರಿಯಾಪಟ್ಟಣದಲ್ಲಿ 80 ವರ್ಷ ಮೇಲ್ಪಟ್ಟವರು-92, ವಿಶೇಷಚೇತನರು 25 ಒಟ್ಟಾರೆ 117, ತಿ.ನರಸೀಪುರದಲ್ಲಿ 80 ವರ್ಷ ಮೇಲ್ಪಟ್ಟವರು-31, ವಿಶೇಷಚೇತನರು-8, ಒಟ್ಟಾರೆ 39, ವರುಣದಲ್ಲಿ 80 ವರ್ಷ ಮೇಲ್ಪಟ್ಟವರು 86, ವಿಶೇಷಚೇತನರು-21 ಒಟ್ಟಾರೆ 107 ಜನರು ಭಾನುವಾರ ಮತದಾನ ಮಾಡಿದ್ದಾರೆ ಎಂದು ಚು.ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top