ಚಾರ್ವಾಕದಿಂದ ಆಲಂಕಾರಿಗೆ ವಿದ್ಯುತ್ ಪೂರೈಕೆಗೆ ಗ್ರಾಮಸ್ಥರ ವಿರೋಧ ►ಪ್ರತ್ಯೇಕ ಫೀಡರ್ ನಿಂದ ವಿದ್ಯುತ್ ಪೂರೈಸುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸವಣೂರು, ಜ.13. ಸವಣೂರು ಸಬ್ ಸ್ಟೇಷನ್ ಚಾರ್ವಾಕ ಫೀಡರ್ ನಿಂದ ಆಲಂಕಾರು ಗ್ರಾಮಕ್ಕೆ ವಿದ್ಯುತ್ ಪೂರೈಸಲು ಇಲಾಖೆಯು ಮುಂದಾಗಿರುವುದನ್ನು ವಿರೋಧಿಸಿ ಹಾಗೂ ಪ್ರತ್ಯೇಕ ಫೀಡರ್ ಮೂಲಕ ವಿದ್ಯುತ್ ಸರಬರಾಜುಗೊಳಿಸುವಂತೆ ಒತ್ತಾಯಿಸಿ ಚಾರ್ವಾಕ, ದೋಳ್ಪಾಡಿ, ಕುದ್ಮಾರು ಗ್ರಾಮಗಳ ಕೃಷಿಕರು ಪ್ರತಿಭಟನೆ ನಡೆಸಿದ ಘಟನೆ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಶುಕ್ರವಾರದಂದು ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ, ಸವಣೂರು 33/11 ಕೆವಿ ವಿದ್ಯುತ್ ಉಪಕೇಂದ್ರದ ಚಾರ್ವಾಕ ಫೀಡರ್ ನಿಂದ ಈಗಾಗಲೇ ಸವಣೂರು, ಕುದ್ಮಾರು, ಕಾೖಮಣ, ಬೆಳಂದೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ ಹಲವಾರು ಟ್ರಾನ್ಸ್‌ ಫಾರ್ಮರ್ ಗಳಿಗೆ ಸಂಪರ್ಕ ಕಲ್ಪಿಸಿದ್ದು, ಅಧಿಕ ಸಂಖ್ಯೆಯ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾವೇ ಲೋ ವೋಲ್ಟೇಜ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಒಂದು ವೇಳೆ ಆಲಂಕಾರು ಭಾಗದ ಜನರಿಗೆ ಇಲ್ಲಿಂದ ಸಂಪರ್ಕ ನೀಡಿದಲ್ಲಿ ಎರಡು ಪ್ರದೇಶದವರಿಗೂ ತೀವ್ರತರವಾಗಿ ವಿದ್ಯುತ್ ಸಮಸ್ಯೆ ತಲೆದೋರಬಹುದು. ಗುತ್ತಿಗೆದಾರರು ಲೈನ್ ಎಳೆಯುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದು, ತಕ್ಷಣವೇ ಕೆಲಸವನ್ನು ನಿಲ್ಲಿಸಬೇಕು. ಸವಣೂರಿನ ಪ್ರತ್ಯೇಕ ಫೀಡರ್ ನಿಂದ ಆಲಂಕಾರಿಗೆ ಸಂಪರ್ಕ ನೀಡವುದಕ್ಕೆ ನಮ್ಮದೇನು ವಿರೋಧವಿಲ್ಲ. ಆದರೆ ಚಾರ್ವಾಕ ಫೀಡರ್ ನಿಂದ ಯಾವುದೇ ಕಾರಣಕ್ಕೂ ಲೈನ್ ಎಳೆಯಲು ನಾವು ಬಿಡುವುದಿಲ್ಲ. ಇಲಾಖೆ ಒಂದು ವೇಳೆ ನಮ್ಮ ನಿಲುವಿಗೆ ವಿರುದ್ಧವಾಗಿ ಕಾರ್ಯಪ್ರವೃತ್ತವಾದಲ್ಲಿ ಸಾವಿರಾರು ಮಂದಿ ಸೇರಿ ಉಗ್ರ ರೂಪದ ಪ್ರತಿಭಟನೆಗೆ ಇಳಿಯಲಿದ್ದೇವೆ ಎಂದು ಎಚ್ಚರಿಸಿದರು.

Also Read  ಇಂದು (ಮೇ.19) ಬೆಳಿಗ್ಗೆಯಿಂದ ಸಂಜೆಯವರೆಗೆ ಬೆತ್ತೋಡಿ ಮಖಾಂ ಉರೂಸ್ ಸಮಾರಂಭ

ಚಾರ್ವಾಕ ಫೀಡರ್ ನಿಂದ ಆಲಂಕಾರಿಗೆ ವಿದ್ಯುತ್ ಸಂಪರ್ಕ ನೀಡದಲ್ಲಿ ವೋಲ್ಟೇಜ್ ಸಮಸ್ಯೆಯಿಂದ ಎರಡೂ ಭಾಗದ ಕೃಷಿಕರಿಗೂ ತೊಂದರೆಯಾಗಲಿದೆ. ಆಲಂಕಾರಿಗೆ ಸವಣೂರು ಸಬ್ಸ್ಟೇಷನ್ನಲ್ಲಿ ಫೀಡರ್ ನಿರ್ಮಾಣವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರದಲ್ಲೇ ಕಾಮಗಾರಿಯನ್ನು ಪುರ್ಣಗೊಳಿಸಿ, ಆಲಂಕಾರಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸೀತಾರಾಮ ಗೌಡ ನಾಣಿಲ ಆಗ್ರಹಿಸಿದರು. ಸವಣೂರು ಗ್ರಾಪಂ ಸದಸ್ಯ ಪ್ರಕಾಶ್ ಕುದ್ಮನಮಜಲು, ಕಾಣಿಯೂರು ಗ್ರಾಪಂ ಮಾಜಿ ಸದಸ್ಯ ಸುಂದರ ಗೌಡ ದೇವಸ್ಯ, ಕೃಷಿಕರಾದ ವಿಶ್ವನಾಥ ಪಾಲ್ತೂರು, ಬಾಲಚಂದ್ರ ಕೆರೆನಾರು, ಬಾಲಚಂದ್ರ ನೂಜಿ, ಪುನೀತ್ ಹೊಸವಕ್ಲು, ಚೇತನ್, ಅಬೂಬಕ್ಕರ್ ಅನ್ಯಾಡಿ, ಇಬ್ರಾಹಿಂ, ಬಾಲಚಂದ್ರ ನೂಜಿ ಸೇರಿದಂತೆ ಸ್ಕಂದಶ್ರೀ ಯುವಕ ಮಂಡಲದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Also Read  ಬೋಳ್ನಡ್ಕ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ; ಮೊಸರು ಕುಡಿಕೆ ಉತ್ಸವ

error: Content is protected !!
Scroll to Top