ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಭಾರೀ ಬದಲಾವಣೆ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.20. ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಕುರಿತು, ಪ್ರಮುಖ ದಿನಾಂಕಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ.

ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಮಕ್ಕಳ ಶಾಲಾ ದಿನಗಳ ಸಂಖ್ಯೆಯನ್ನು 26 ದಿನಗಳು ಕಡಿತಗೊಂಡಿವೆ. ಹೀಗಾಗಿ ಈ ವರ್ಷ ಒಟ್ಟು 244 ಶಾಲಾ ದಿನಗಳು ಇರಲಿದ್ದು, ಇದರಲ್ಲಿ 180 ದಿನಗಳು ಮಾತ್ರ ಬೋಧನಾ ದಿನಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಸಾಂಕ್ರಾಮಿಕ ರೋಗದಲ್ಲಿ ಸಂಭವಿಸಿದ ಕಲಿಕೆಯ ನಷ್ಟವನ್ನು ಸರಿದೂಗಿಸಲು, 2022-23 ಶೈಕ್ಷಣಿಕ ವರ್ಷವು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರಾರಂಭಗೊಂಡಿತ್ತು, ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇಲ್ಲದಿರುವುದು ಹಾಗೂ ದಸರಾ ರಜೆ ಹೆಚ್ಚಾಗಿರುವುದರಿಂದ ಈ ಬಾರಿ ಶಾಲಾ ದಿನಗಳು ಕಡಿಮೆಯಾಗಿವೆ.

ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಶಾಲಾ ಕರ್ತವ್ಯ ದಿನಗಳಲ್ಲಿ ಭಾರೀ ಕಡಿತವಾಗಿದೆ. ಅದೇ ರೀತಿ ಕಲಿಕಾ ದಿನಗಳಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ, 48 ದಿನಗಳಷ್ಟು ಇಳಿಕೆ ಕಂಡು ಬಂದಿದೆ. 2022-23ರ ಶೈಕ್ಷಣಿಕ ವರ್ಷದಲ್ಲಿ 270 ಕರ್ತವ್ಯದ ದಿನಗಳಿದ್ದವು. ಈ ಮೂಲಕ ಹೆಚ್ಚುವರಿಯಾಗಿ 26 ರಜಾ ದಿನಗಳು ಈ ವರ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಿಗಲಿದೆ. ಒಟ್ಟಾರೆಯಾಗಿ ಹಿಂದಿನ ವರ್ಷದ ಶೇ. 74ರಷ್ಟು ದಿನ ಶಿಕ್ಷಣ ಸಂಬಂಧಿ ಚಟುವಟಿಕೆ ನಡೆದಿದ್ದರೆ, ಈ ವರ್ಷ ಶೇ. 67ರಷ್ಟು ದಿನ ನಡೆಯಲಿದೆ.

Also Read  ಮಾಜಿ ಶಾಸಕ ಸಾ.ರಾ.ಮಹೇಶ್ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ

ಕಳೆದ ಬಾರಿ ಕೊರೋನಾ ಕಾರಣದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆಗಿರುವ ಹಿನ್ನಡೆಯನ್ನು ಸರಿದೂಗಿಸಲು ಮೇ ತಿಂಗಳ 14ರಿಂದ ಶಾಲಾ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿತ್ತು. ಮೇ ತಿಂಗಳಲ್ಲಿ 14 ದಿನ ಕಲಿಕಾ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ, ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುವುದಿಲ್ಲ. ಮೇ 29ರಿಂದ ಶಾಲೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.

ಇನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ 228 ಬೋಧನಾ ಕಲಿಕೆ ದಿನಗಳಿದ್ದರೆ, ಈ ವರ್ಷ ಕೇವಲ 180 ಕಲಿಕಾ ದಿನಗಳಿರಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 244 ಶಾಲಾ ಕರ್ತವ್ಯದ ದಿನಗಳನ್ನು ಸರ್ಕಾರ ನಿಗದಿ ಪಡಿಸಿದೆ. ಇದರಲ್ಲಿ ಬೋಧನಾ – ಕಲಿಕೆ ಪ್ರಕ್ರಿಯೆಗೆ ಕೇವಲ 180 ದಿನ ಉಳಿಯಲಿದೆ. ಉಳಿದಂತೆ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಪ್ರಕ್ರಿಯೆಗಳಿಗಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ / ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣೆ ಕಾರ್ಯಕ್ಕಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫ‌ಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು ಮತ್ತು ಶಾಲಾ ಸ್ಥಳೀಯ ರಜೆಗಳು ಎಂದು ನಾಲ್ಕು ದಿನವನ್ನು ನಿಗದಿಪಡಿಸಲಾಗಿದೆ.ಹೀಗಾಗಿ ಈ ವರ್ಷದಲ್ಲಿ ಕೇವಲ 180 ಕಲಿಕಾ ದಿನಗಳಿರಲಿವೆ.

error: Content is protected !!
Scroll to Top