ಚೀನಾ ಗಡಿಯಲ್ಲಿ ಅಲರ್ಟ್ ಆಗಿರಿ ➤ ಭೂಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸೂಚನೆ

(ನ್ಯೂಸ್ ಕಡಬ) newskadaba.com. ಹೊಸದಿಲ್ಲಿ, ಏ.20. ನೆರೆಯ ಚೀನಾ ಗಡಿಯಲ್ಲಿ ಗಸ್ತು ಹೆಚ್ಚಿಸುವ ಮೂಲಕ ಹೆಚ್ಚಿನ ನಿಗಾ ವಹಿಸಿ ಎಂದು ಕೇಂದ್ರ ಸರಕಾರ, ಭೂಸೇನಾಪಡೆಗೆ ಸೂಚನೆ ನೀಡಿದೆ. ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂಥದ್ದೊಂದು ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಚೀನಾಗೆ ಹೊಂದಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ ಎಂದು ಗುಪ್ತಚರ ವರದಿ ಹಿನ್ನೆಲೆಯಲ್ಲಿ ಸಚಿವರ ಈ ಸೂಚನೆ ಮಹತ್ವ ಪಡೆದಿದೆ.  ‘ಉತ್ತರ ವಲಯದಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿದೆ. ಹೀಗಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ನಮ್ಮ ಪಡೆಗಳು ಸದಾ ಅಲರ್ಟ್‌ ಆಗಿರಬೇಕು. ಅದರಲ್ಲೂ ಭೂಸೇನೆಯು ಎಲ್‌ಎಸಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು,” ಎಂದು ರಾಜನಾಥ್‌ ಸಿಂಗ್‌ ಸೂಚಿಸಿದರು ಎನ್ನಲಾಗಿದೆ.

Also Read  ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ.!➤ಮೂವರು ಅಧಿಕಾರಿಗಳ ವಿರುದ್ಧ FIR  ದಾಖಲು

”ವಿಶ್ವದಾದ್ಯಂತ ಭೌಗೋಳಿಕ ರಾಜಕೀಯ ಸ್ಥಿತಿಗತಿಗಳು ಮೊದಲಿನಂತೆ ಇಲ್ಲ. ಬದಲಾಗುತ್ತಲೇ ಇದೆ. ಪಾಕಿಸ್ತಾನ ಮತ್ತು ಚೀನಾದಿಂದ ಭಾರತ ಸದಾ ಗಡಿಯಲ್ಲಿ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಯೋಜನೆ ಮತ್ತು ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು,” ಎಂದು ಸಚಿವರು ಸಶಸ್ತ್ರ ಪಡೆಗಳಿಗೆ ಕರೆ ನೀಡಿದರು ಎಂದು ತಿಳಿದುಬಂದಿದೆ.

error: Content is protected !!
Scroll to Top