(ನ್ಯೂಸ್ ಕಡಬ) newskadaba.com. ಕಡಬ, ಏ.17. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾ.ಪಂ.ಗಳ ಮೂಲಕ ಗ್ರಾಮೀಣ ಭಾಗದ ಜನರ ಕೈಹಿಡಿದಿದೆ ಎನ್ನುವುದಕ್ಕೆ ಕಳೆದ ಮೂರು ವರ್ಷ ಸರಕಾರ ನೀಡಿದ್ದ ಮಾನವ ದಿನಗಳ ಗುರಿಯನ್ನು ಸಾಧಿಸುವ ಮೂಲಕ ಕಡಬ ತಾಲೂಕು ಗುರಿ ಮೀರಿದ ಸಾಧನೆಯನ್ನು ಮಾಡಿರುವುದೇ ಸಾಕ್ಷಿ.
ರಾಜ್ಯ ಸರಕಾರ 2022-23 ನೇ ಆರ್ಥಿಕ ವರ್ಷದಲ್ಲಿ ಕಡಬ ತಾಲೂಕಿಗೆ 2,30,509 ಮಾನವ ದಿನ ಸೃಜನೆಯ ಗುರಿಯನ್ನು ನಿಗದಿಪಡಿಸಿತ್ತು. ಆದರೆ ತಾಲೂಕು 2,99,667 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 113 ಗುರಿಯನ್ನು ಸಾಧಿಸಿದೆ. 21 ಗ್ರಾ.ಪಂ.ಗಳ ಮೂಲಕ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಕುಶಲ ಉದ್ಯೋಗವನ್ನು ಹಾಗೂ ಗ್ರಾಮೀಣ ಜನತೆಯ ಜೀವನೋಪಾಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವ ಮೂಲಕ ಹಾಗೂ ಗ್ರಾಮೀಣ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಂಡು ಗುರಿ ಮೀರಿದ ಸಾಧನೆಯನ್ನು ಮಾಡಿದೆ.
ತಾಲೂಕು ಕಳೆದ ಆರ್ಥಿಕ ವರ್ಷದಲ್ಲಿ 2,78,067 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.139 ಗುರಿ ಮೀರಿದ ಸಾಧನೆಯನ್ನು ಮಾಡಿತ್ತು. ಈ ಬಾರಿ ವಿಶೇಷವಾಗಿ ಗೋಳಿತೊಟ್ಟು, ಶಿರಾಡಿ, ಬೆಳಂದೂರು, ಸವಣೂರು ಗ್ರಾ.ಪಂ.ಗಳು ಹೆಚ್ಚಿನ ಮಾನವ ದಿನಗಳನ್ನು ಸೃಜಿಸಿವೆ.