ನಾಯಿ ವಿಚಾರಕ್ಕೆ ಗಲಾಟೆ ➤ಬ್ಯಾಟ್ ನಿಂದ ಹೊಡೆದು ವೃದ್ಧನ ಹತ್ಯೆ!

(ನ್ಯೂಸ್ ಕಡಬ) newskadaba.com ಬೆಂಗಳೂರು, .11. ಮನೆ ಮುಂದೆ ನಾಯಿ ಕರೆದುಕೊಂಡು ಗಲೀಜು ಮಾಡಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಬ್ಯಾಟ್​ನಿಂದ ಹೊಡೆದು ಹಿರಿಯ ನಾಗರಿರೊಬ್ಬರ ಹತ್ಯೆ ಮಾಡಲಾಗಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಲದೇವನಹಳ್ಳಿಯ ಗಣಪತಿನಗರ ನಿವಾಸಿ 67 ವರ್ಷದ ಮುನಿರಾಜು ಕೊಲೆಯಾದ ವೃದ್ಧ. ಘಟನೆಯಲ್ಲಿ ಮುರುಳಿ ಎಂಬಾತ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಕೃತ್ಯವೆಸಗಿದ ಸಂಬಂಧ ಪ್ರಮೋದ್, ರವಿಕುಮಾರ್ ಹಾಗೂ ಈತನ ಪತ್ನಿ ಪಲ್ಲವಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯಲಹಂಕ ಮೂಲದ ಮುನಿರಾಜು ಕಳೆದ ಮೂರು ವರ್ಷಗಳಿಂದ ಗಣಪತಿ ನಗರದಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು‌. ಖಾಸಗಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದರು. ಅದೇ ಏರಿಯಾದಲ್ಲಿ ರವಿಕುಮಾರ್ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ನಾಯಿಗಳನ್ನ ಸಾಕಿಕೊಂಡಿದ್ದರು‌. ಸ್ನೇಹಿತ ಪ್ರಮೋದ್ ಜೊತೆಗೆ ರವಿ ಆಗಾಗ ನಾಯಿಗಳನ್ನು ಮುನಿರಾಜು ಅವರ ಮನೆ ಮುಂದೆ ಕರೆದೊಯ್ದು ಮಲ – ಮೂತ್ರ ಮಾಡಿಸುತ್ತಿದ್ದ. ಅಲ್ಲದೇ ಅದೇ ಜಾಗದಲ್ಲಿ ಸಿಗರೇಟು ಸೇದುತ್ತಿದ್ದ ಎಂದು ರವಿ ಮತ್ತು ಮುನಿರಾಜುರ ನಡುವೆ ಹಲವು ಬಾರಿ ಮಾತಿನ ಸಂಘರ್ಷ ನಡೆದಿತ್ತು‌. ಈ ಸಂಬಂಧ ಮುನಿರಾಜು ಪೊಲೀಸ್​ ಠಾಣೆಗೆ ತೆರಳಿ ದೂರು ಸಹ ನೀಡಿದ್ದರು.

Also Read  ರಾಷ್ಟ್ರಗೀತೆ ವೇಳೆ ಪ್ಯಾಂಟ್ ನಲ್ಲೇ ಮೂತ್ರ ಮಾಡಿದ ಸುಡಾನ್ ಅಧ್ಯಕ್ಷ ➤  ವಿಡಿಯೋ ಮಾಡಿದ್ದ 6 ಪತ್ರಕರ್ತರ ಬಂಧನ            

ದೂರಿನ ಮೇರೆಗೆ ಪೊಲೀಸರು ಪ್ರಮೋದ್ ಮತ್ತು ರವಿಕುಮಾರ್ ಇಬ್ಬರನ್ನು ಕರೆಯಿಸಿ ಮಾತುಕತೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು‌.‌ ಆದರೆ ಮತ್ತೆ ಇದೇ ವಿಚಾರಕ್ಕಾಗಿ ಗಲಾಟೆ ನಡೆದಿದೆ. ಈ ವೇಳೆ, ಮುನಿರಾಜು ಪರವಾಗಿ ಮಾತನಾಡಿದ್ದ ಮುರುಳಿ ಎಂಬುವವರನ್ನು ನಿಂದಿಸಿ ಬ್ಯಾಟ್​ನಿಂದ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮುನಿರಾಜುಗೂ ಸಹ ಬ್ಯಾಟ್​ ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಮುನಿರಾಜು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.‌ ಕೂಡಲೇ ಈ ಇಬ್ಬರನ್ನು ಆಸ್ಪತ್ರೆಗೂ ಕರೆದೊಯ್ಯಲಾಗಿದೆ. ಮುನಿರಾಜು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮುರುಳಿ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯವೆಸಗಿದ ಪ್ರಮೋದ್, ರವಿಕುಮಾರ್ ಹಾಗೂ ಇದಕ್ಕೆ ಸಹಾಯ ಮಾಡಿದ ರವಿ ಪತ್ನಿ ಪಲ್ಲವಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

error: Content is protected !!
Scroll to Top