(ನ್ಯೂಸ್ ಕಡಬ) newskadaba.com ಕಡಬ, ಜ.10. ಬುದ್ಧಿವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದಿಂದಾಗಿ ಜಿಲ್ಲೆಗೆ ಇದೀಗ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲೆಯ ಜನತೆ ವೈಷಮ್ಯ ಬಿಟ್ಟು ಸಾಮರಸ್ಯದಿಂದ ಬದುಕಿ ಜಿಲ್ಲೆಯ ಜನತೆ ಬುದ್ದಿವಂತರೆನ್ನುವುದನ್ನು ಸಾಬೀತು ಪಡಿಸಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ ರಾಮಕುಂಜ ಗ್ರಾಮದ ಅಮೈ ಎಂಬಲ್ಲಿ ನಿರ್ಮಿಸಲಾಗಿರುವ ‘ಅಮೈ ಕೆರೆ’ಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭವಾನಿ ಚಿದಾನಂದ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಂತಿ ಆರ್. ಗೌಡ, ಶ್ರೀಮತಿ ತೇಜಸ್ವಿನಿ ಶೇಖರ್ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸುಳ್ಯ ಶಾಸಕರಾದ ಎಸ್. ಅಂಗಾರ ಸಭಾಧ್ಯಕ್ಷತೆ ವಹಿಸಿದ್ದರು.