(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ರಾಜಕೀಯಕ್ಕೆ ಧುಮುಕುವುದಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ವ್ಯಕ್ತಿಯೋರ್ವರು ಖಾಕಿ ಕಳಚಿಟ್ಟು ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ನಗರ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಸ್ಟೇಷನ್ ನಲ್ಲಿ ಸಬ್ ಇನ್ಸ್ ಪೆಕ್ಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮದನ್ ತಮ್ಮ ಪೊಲೀಸ್ ಡ್ಯೂಟಿಗೆ ಗುಡ್ ಬೈ ಹೇಳಿ ಸಕ್ರಿಯ ರಾಜಕೀಯಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಮೂಲತಃ ಕೊಡಗಿನವರಾದ ಮದನ್ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಬಂದರು ಹಾಗು ನಂತರ ಬಜಪೆ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮದನ್ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮದನ್ ಸಕ್ರಿಯ ರಾಜಕಾರಣಕ್ಕೆ ಇಳಿಯುವ ಸಂಬಂಧ ಈಗಾಗಲೇ ತಮ್ಮ ಆಪ್ತ ವಲಯದಲ್ಲಿ ಹಾಗೂ ಸೇವಾ ಸಂಸ್ಥೆಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮದನ್ ಮಂಗಳೂರು ಬಂದರ್ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಸಾಮಾಜಿಕ ಕಾರ್ಯಗಳಿಂದ ಮದನ್ ಜನರ ವಿಶ್ವಾಸ ಗಳಿಸಿದ್ದರು. ಇದೀಗ ಮದನ್ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.