ಐಎಸ್ಐ ಮುದ್ರೆ ಇಲ್ಲದ ಹೆಲ್ಮೆಟ್ ಧರಿಸಿ ಅಪಘಾತವಾದರೆ ಇನ್ಶುರೆನ್ಸ್‌ ನೀಡಬೇಕಾಗಿಲ್ಲ ►ಹೈಕೋರ್ಟಿನಿಂದ ಮಹತ್ವದ ತೀರ್ಪು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.10. ಬೈಕ್ ಅಪಘಾತದ ಸಂದರ್ಭದಲ್ಲಿ ಪ್ರಾಣ ಹಾನಿ ಅಥವಾ ದೈಹಿಕ ಹಾನಿಯುಂಟಾದ ಸಂದರ್ಭದಲ್ಲಿ ಐಎಸ್‌ಐ ಮುದ್ರೆ ಹೊಂದಿರದ ಹೆಲ್ಮೆಟ್ ಧರಿಸಿದ್ದರೆ ಅಥವಾ ಸೀಟ್ ಬೆಲ್ಟ್ ಧರಿಸದೆ ಇದ್ದರೆ ಅಂತಹ ವಾಹನ ಸವಾರರು ವಿಮಾ ಹಣ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

 

ಬಸ್ ಮತ್ತು ಬೈಕ್ ನಡುವಿನ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಾವಗಡ ತಾಲ್ಲೂಕಿನ ಓಬಳಾಪುರ ಗ್ರಾಮದ ಎನ್‌. ನರೇಶ್‌ ಬಾಬು ಮತ್ತು ಸಿ.ವಿ.ಜಯಂತ್‌ ಎಂಬವರಿಗೆ ಪರಿಹಾರವಾಗಿ ವಿಮಾ ಕಂಪನಿ ₹ 2.58 ಲಕ್ಷ ನೀಡಬೇಕು ಎಂದು ಮಧುಗಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಆದೇಶಿಸಿದ್ದರು. ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಓರಿಯಂಟಲ್ ವಿಮಾ ಕಂಪೆನಿಯು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಮೋಟಾರು ಸೈಕಲ್ ಹಾಗೂ ಸ್ಕೂಟರ್ ಸೇರಿ ದ್ವಿಚಕ್ರ ವಾಹನಗಳ ಸವಾರರಿಬ್ಬರೂ ಕರ್ನಾಟಕದ ಯಾವುದೇ ಭಾಗದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಮೋಟಾರು ವಾಹನ ಕಾಯ್ದೆಯು ಸೆಕ್ಷನ್ 230ರನ್ವಯ ರಕ್ಷಣಾತ್ಮಕ ಹೆಲ್ಮೆಟ್ ಅನ್ನೇ ಹಾಕಿಕೊಳ್ಳಬೇಕು. ಐಎಸ್‌ಐ ಮುದ್ರೆ ಹೊಂದಿದ ಹೆಲ್ಮೆಟ್ ಧರಿಸದೆ ಅಪಘಾತದಲ್ಲಿ ಗಾಯಗೊಂಡರೆ ವಿಮೆ ಹಣ ಪಡೆಯಲು ಅರ್ಹರಾಗಿರುವುದಿಲ್ಲ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ತೀರ್ಪಿನಲ್ಲಿ ವಿವರಿಸಿದೆ.

Also Read  ರಾಜ್ಯಕ್ಕೆ ಕಾಲಿಟ್ಟ ಕುಖ್ಯಾತ ವಂಚಕರ ಮೂರು ತಂಡ ► ಆಣೆ, ಪ್ರಮಾಣದ ನೆಪದಲ್ಲಿ ಚಿನ್ನಾಭರಣ ಲೂಟಿ

error: Content is protected !!
Scroll to Top