(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.10. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಒಂದೇ ಕಡೆ ಬೀಡುಬಿಟ್ಟು ಕಾರ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಕೆಳಹಂತದ ಪೊಲೀಸ್ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡುವ ಬಗ್ಗೆ ಐಜಿಪಿಯಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಅವರು ಸೋಮವಾರದಂದು ವಿಕಾಸಸೌಧದಲ್ಲಿನ ತನ್ನ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ಪೊಲೀಸ್ ಇಲಾಖೆಯಲ್ಲಿ ಏಳು ವಲಯಗಳನ್ನು ರಚಿಸಲಾಗಿದ್ದು, ಆಯಾ ವಲಯದಲ್ಲಿರುವ ಕೆಳಹಂತದ ಸಿಬ್ಬಂದಿಗಳು ಹಲವು ವರ್ಷಗಳಿಂದ ಅದೇ ವಲಯದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳೆಲ್ಲ ಒಳ್ಳೆಯವರಿದ್ದು, ಕೆಳಹಂತದ ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲು ಕ್ರಮ ವಹಿಸಲಾಗುವುದು ಎಂದಿದ್ದಾರೆ. ವಿಶೇಷವಾಗಿ ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ
ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವಂತಹ ಸಿಬ್ಬಂದಿಗಳನ್ನೇ ನಿಯೋಜನೆ ಮಾಡಲಾಗುವುದು ಎಂದರು.