(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮಾ.29. ಸರಕಾರದ ಬೆಳಕು ಯೋಜನೆಯಲ್ಲಿ ದುರ್ಗಮ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಒಟ್ಟು 33 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಪೂರ್ಣಗೊಂಡಿದ್ದು , ಉದ್ಘಾಟನೆಗೊಳ್ಳುವ ಮೂಲಕ ಇಲ್ಲಿನ ಮನೆಗಳಲ್ಲಿ ವಿದ್ಯುತ್ ಬೆಳಕು ಚೆಲ್ಲಲಿದ್ದು, ಸರಿ ಸುಮಾರು 75 ವರ್ಷಗಳ ಬಳಿಕ ವಿದ್ಯುತ್ ಸಂಪರ್ಕ ಸಿಗುತ್ತಿದೆ.
ಬೆಳ್ತಂಗಡಿಯಿಂದ 120 ಕಿಮೀ ದೂರದಲ್ಲಿರುವ ಎಳನೀರು ಪ್ರದೇಶದಲ್ಲಿ 150 ರಷ್ಟು ಮನೆಗಳು ಹಾಗೂ 600ಕ್ಕಿಂತ ಅಧಿಕ ಜನಸಂಖ್ಯೆ ಇದೆ. ಜಲಪಾತಗಳ ಸಹಿತ ರಮಣೀಯ ಪ್ರಕೃತಿ ಸೌಂದರ್ಯದ ಎಳನೀರು ಪರಿಸರದಲ್ಲಿನ ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಚಿಮಣಿ ದೀಪದ ಬೆಳಕಿನಲ್ಲಿ ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು.
ಉಜಿರೆ ಮೆಸ್ಕಾಂ ಉಪ ವಿಭಾಗದ ಸೋಮಂತಡ್ಕ ಶಾಖಾ ಕಚೇರಿ ಸುಪರ್ದಿಯಲ್ಲಿ 32,92,110 ರೂ. ಅನುದಾನದಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 152 ಎಲ್ ಟಿ ಕಂಬ ಅಳವಡಿಸಿ, 4.5 ಕಿಮೀ. ಉದ್ದದ ವಿದ್ಯುತ್ ಲೈನ್ ಎಳೆಯಲಾಗಿದೆ ಎನ್ನಲಾಗಿದೆ.