(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ 28. ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ವಿಧಿಸಲಾಗಿದ್ದ ಗಡುವನ್ನು ಆದಾಯ ತೆರಿಗೆ ಇಲಾಖೆ ಇದೀಗ ಜೂನ್ 30ರವರೆಗೆ ವಿಸ್ತರಿಸಿದೆ. ಗಡುವು ಅವಧಿಗೆ ಮೂರು ದಿನ ಇರುವಾಗ ಮತ್ತೆ ಅವಧಿ ವಿಸ್ತರಣೆಯಾಗಿದೆ.
1000 ರೂ. ಶುಲ್ಕದೊಂದಿಗೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಮಾರ್ಚ್ 31ರ ಗಡುವು ನೀಡಲಾಗಿತ್ತು. ಜೋಡಣೆಗೆ ಕೊನೆಯ ದಿನ ಸಮೀಪಿಸುತ್ತಿದ್ದಂತೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಸೈಬರ್ ಸೆಂಟರ್‌ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಇದರಿಂದ ಸೈಬರ್ ಸೆಂಟರ್‌ಗಳಲ್ಲಿಯೂ ಸರ್ವರ್ ಡೌನ್ ಸಹಿತ ಹಲವು ಸಮಸ್ಯೆ ತಲೆದೋರಿದೆ. ಇದೀಗ ಮತ್ತೆ ಗಡುವು ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಮಂಗಳವಾರ ಟ್ವೀಟ್ ಮಾಡಿದೆ.
ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಕೇಂದ್ರಗಳಿಗೆ ಆಗಮಿಸುತ್ತಿರುವುದರಿಂದ ಬಹುತೇಕ ಸೈಬರ್ ಕೇಂದ್ರಗಳು ಇದನ್ನೂ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು 1 ಸಾವಿರ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 200, 500 ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.