(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ. 28. ಅಶಿಸ್ತು ತೋರಿದ ಆರೋಪದ ಅಡಿ ಸುಬ್ರಹ್ಮಣ್ಯ ನಗರ ಠಾಣೆಯ ಇಬ್ಬರು ಪೊಲೀಸ್ ಕಾನ್ ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಕಾನ್‌ಸ್ಟೆಬಲ್ ವಿಜಯ್ ರಾಥೋಡ್, ಠಾಣಾ ಬರಹಗಾರ ಶಿವಕುಮಾರ್ ಅಮಾನತುಗೊಂಡ ಸಿಬ್ಬಂದಿ.
‘ಠಾಣೆಯ ಇನ್‌ಸ್ಪೆಕ್ಟರ್ ಶರಣಗೌಡ ಅವರು ರಜೆ ನೀಡುತ್ತಿಲ್ಲ. ತಮಗೆ ಹಣ ಮಾಡಿಕೊಡುವಂತೆ ಕೆಳಗಿನ ಸಿಬ್ಬಂದಿ, ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶಿವಕುಮಾರ್ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದರು ಎಂಬ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ.
‘ಯಾರೂ ಹಣ ಮಾಡಿ ಕೊಡುತ್ತಾರೆಯೇ ಅವರಿಗೆ ಮಾತ್ರ ರಜೆ ನೀಡುತ್ತಾರೆ. ಎಲ್ಲ ಸೌಲಭ್ಯಗಳನ್ನು ಕೊಡುತ್ತಾರೆ. ಠಾಣಾ ಸರಹದ್ದು ಗಸ್ತಿಗೆ ಎಂದು ಮಂಜೂರು ಆಗಿರುವ ದ್ವಿಚಕ್ರ ವಾಹನಗಳನ್ನು ಬೀಟ್ ಸಿಬ್ಬಂದಿಗೆ ನೀಡಲು ₹ 5 ಸಾವಿರ ಕೇಳುತ್ತಾರೆ. ಅವರ ಮಕ್ಕಳನ್ನು ಈಜುಕೊಳಕ್ಕೆ ಬಿಡಲು ಸರ್ಕಾರಿ ವಾಹನ ಹೊಯ್ಸಳ ಬಳಸಿಕೊಳ್ಳುತ್ತಾರೆ. ಅಲ್ಲದೆ ಪೊಲೀಸ್ ಸಿಬ್ಬಂದಿಯನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
‘ಮಹಿಳಾ ಸಿಬ್ಬಂದಿ ರಜೆ ಕೇಳಲು ತೆರಳಿದರೆ ಬೇರೆ ದೃಷ್ಟಿಯಲ್ಲಿ ನೋಡುತ್ತಾರೆ. ಸಿಬ್ಬಂದಿಗೆ ಸಾರ್ವಜನಿಕರ ಎದುರು ಅವಮಾನ ಮಾಡುತ್ತಾರೆ. ನಾನು ಠಾಣೆಗೆ ಬಂದು ಇಷ್ಟು ದಿನ ಕಳೆದಿದೆ. ಎಷ್ಟು ದುಡ್ಡು ಮಾಡಿಕೊಟ್ಟಿದ್ದೀಯಾ’ ಎಂದು ಪ್ರಶ್ನಿಸುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಳಿಕ, ಮಲ್ಲೇಶ್ವರ ಎಸಿಪಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು.