(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.07. ವಿಜಯ-ವಿಕ್ರಮ ಜೋಡುಕರೆ ಕಂಬಳವು ಫೆ.24 ಮತ್ತು ಫೆ.25ರಂದು ನಡೆಯಲಿರುವುದರಿಂದ ಹಳೆಗೇಟು ದಡ್ಡುವಿನ ಶ್ರೀ ರಾಜನ್ ದೈವ ಕಲ್ಕುಡಕಟ್ಟೆಯ ಬಳಿ ಇರುವ ನೇತ್ರಾವತಿ ನದಿ ಕಿನಾರೆಯ ಕಂಬಳ ಕರೆಯಲ್ಲಿ ಭಾನುವಾರ ಕಂಬಳಕ್ಕಾಗಿ ಕರೆ ಮುಹೂರ್ತ ನಡೆಯಿತು.
ಕರೆ ಮುಹೂರ್ತ ನೆರವೇರಿಸಿ ಮಾತನಾಡಿದ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಕಂಬಳ ಪರ ಕಾನೂನು ಹೋರಾಟಗಾರ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸ್ಪಂದನೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಕಂಬಳ ಕ್ರೀಡೆಗಿದ್ದ ಅಡೆತಡೆ ಈ ಬಾರಿ ನಿವಾರಣೆಯಾಗಿದೆ. ಈ ಬಾರಿಯ ವಿಜಯ- ವಿಕ್ರಮ ಕಂಬಳವನ್ನು ಹಲವು ವೈಶಿಷ್ಟ್ಯಗಳೊಂದಿಗೆ ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದ್ದು, ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಂಬಳದಲ್ಲಿ ಸುಮಾರು 150 ಜೊತೆ ಕೋಣಗಳೂ ಭಾಗವಹಿಸಲಿವೆ. ಕಂಬಳವು ತುಳುನಾಡ ಸಂಸ್ಕೃತಿಯಾಗಿದ್ದು, ಜಾತಿ, ಮತ, ರಾಜಕೀಯ ಬೇಧ ಮರೆತು ಎಲ್ಲರೂ ಒಂದಾಗಿ ಅದನ್ನು ಉಳಿಸಲು ಮುಂದಾಗಬೇಕು. ಸರ್ವರ ಸಹಕಾರ ದೊರೆತಾಗ ಮಾತ್ರ ತುಳುನಾಡ ಸಂಸ್ಕೃತಿಯ ಗತ ಇತಿಹಾಸ ಮತ್ತೆ ಅನಾವರಣಗೊಳ್ಳಲು ಸಾಧ್ಯ ಎಂದರು.