ಬದುಕಿನ ಅರ್ಥ ತಿಳಿಯದ ಜೀವನ ವ್ಯರ್ಥ: ಧರ್ಮಪಾಲನಾಥ ಶ್ರೀ ► ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಜ.07.  ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಬದುಕಿನ ಅರ್ಥ ತಿಳಿಯದೆ ಬಾಳುವುದು ವ್ಯರ್ಥ, ಧರ್ಮದ ಹಾದಿಯಲ್ಲಿ ಬದುಕಿ ಇನ್ನೊಬ್ಬರಿಗೆ ಮಾದರಿಯಾದಾಗ ಜೀವನ ಸಾರ್ಥಕ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ಮನುಷ್ಯ ಸ್ವಾರ್ಥ ಬಿಟ್ಟು ತನ್ನ ಸಮಾಜಕ್ಕೆ ಅಲ್ಪ ಸೇವೆ ಮಾಡಬೇಕು. ಬದುಕಿನ ನಿಜವಾದ ಅರಿವಿನ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸೇವಾ ಮನೋಭಾವದಿಂದ ಬದುಕಿದಾಗ ದೇವರು ಕೊಟ್ಟ ಜನ್ಮ ಸಾರ್ಥಕವಾಗುತ್ತದೆ. ನಾವು ಯಾವತ್ತೂ ಸಮಾಜದಿಂದ ಹೊರತಾಗಿಲ್ಲ. ಸಮಾಜದ ಋಣ ನಮ್ಮ ಮೇಲೆ ಇದ್ದೇ ಇದೆ. ಅದನ್ನು ತೀರಿಸ ಬೇಕಾದರೆ ನಾವು ಧರ್ಮ ಮಾರ್ಗದಲ್ಲಿ ಜೀವನ ಸಾಗಿಸಿ, ಇನ್ನೊಬ್ಬರ ನೋವಿಗೆ ಸಾಧ್ಯವಾದಷ್ಟು ಸ್ಪಂದನೆ ನೀಡಬೇಕು, ಜಾತಿ ಸಂಘಟನೆಗಳು ತಮ್ಮ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿ ತರುವುದರೊಂದಿಗೆ ಇನ್ನೊಂದು ಸಮುದಾಯವನ್ನು ಗೌರವಿಸುವ ಪ್ರಾಂಜಲ ಮನಸ್ಸು ಹೊಂದಿರಬೇಕು. ಆ ಮೂಲಕ ಹಿಂದೂ ಸಮಾಜವನ್ನು ಸಂಘಟಿಸಬೇಕು ಎಂದರು.

Also Read  ಲಾಕ್‌ಡೌನ್ ಉಲ್ಲಂಘನೆ: 154 ವಾಹನ ಮುಟ್ಟುಗೋಲು

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಆದಿಚುಂಚನಗಿರಿ ಮಠ ಶೈಕ್ಷಣಿಕ ಕ್ಷೇತ್ರದ ಅಭೂತಪೂರ್ವ ಸಾಧನೆ ಮಾಡಿ ಇಡೀ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ, ನಾವು ಕೂಡಾ ನಮ್ಮ ಗಳಿಕೆಯ ಒಂದಂಶವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ಸಮಾಜದ ಋಣ ತೀರಿಸಬೇಕು ಎಂದರು. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಜಿಲ್ಲಾ ಅಬಕಾರಿ ಇಲಾಖಾ ಆಯುಕ್ತ ಗೋಪಾಲಕೃಷ್ಣ ಗೌಡ ಪುಯಿಲ, ಮಂಗಳೂರಿನ ಉದ್ಯಮಿ ಸುರೇಶ್ ಬೈಲು, ಮಂಗಳೂರಿನ ಬೆಸೆಂಟ್ ಕಾಲೇಜಿನ ಉಪನ್ಯಾಸಕ ಜಗದೀಶ್ ಕುಮಾರ್ ಗೌಡ ಬಸ್ತಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಗೌಡ ಹಾಗೂ ಸುರೇಶ್ ಬೈಲು ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಇದೇ ವೇಳೆ ವಲಯದ ಗೌಡ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ವಲಯಾಧ್ಯಕ್ಷ ಗಣೇಶ್ ಕೈಕುರೆ, ಕಡಬ ಸರಕಾರಿ ಪದವಿಪುರ್ವ ಕಾಲೇಜಿನ ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಶಾಸಕರ ಅನುದಾನ ಬಿಡುಗಡೆ

 ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಸ್ವಾಗತಿಸಿದರು. ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ನಿಯೋಜಿತ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ವಂದಿಸಿದರು. ಲಕ್ಷ್ಮೀಶ ಗೌಡ ಆರಿಗ ಹಾಗೂ ಕೃಷ್ಣ ಅಲಂಗೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top