(ನ್ಯೂಸ್ ಕಡಬ) newskadaba.com. ಬಂಟ್ವಾಳ, ಮಾ 22. ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿರುವುದು ಏಕೆ ಎಂದು ಲೋಕಾಯುಕ್ತ ಎಸ್ಪಿ ಸೈಮನ್ ಗರಂ ಆದ ಘಟನೆ ಬಂಟ್ವಾಳ ತಾಲೂಕಿನಲ್ಲಿ ಕರೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಡೆಯಿತು
ಎಸ್ಪಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು ಹದಿನೈದರಷ್ಟು ಮಂದಿ ತಮ್ಮ ದೂರು, ದುಮ್ಮಾನ ಸಲ್ಲಿಸಿದರು. ಈ ಸಂದರ್ಭ ಕರೋಪಾಡಿ ಗ್ರಾಮದ ವಿಕ್ಟರ್ ವೇಗಸ್ ಎಂಬವರು ದೂರು ನೀಡಿ, ತನ್ನ ಕಡತಗಳ ಕುರಿತು ತಾಲೂಕು ಕಚೇರಿಯಲ್ಲಿ ಕೇಳಿದರೆ, ತನಗೆ ಸೂಕ್ತ ಮಾರ್ಗದರ್ಶನ ದೊರಕುತ್ತಿಲ್ಲ, ಪ್ರತಿ ಬಾರಿಯೂ ಕಡತ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಈ ಸಂದರ್ಭ ಗರಂ ಆದ ಲೋಕಾಯುಕ್ತ ಎಸ್ಪಿ ಸೈಮನ್, ಸಂಬಂಧಪಟ್ಟ ವಿಷಯ ನಿರ್ವಾಹಕ ವಿಷುಕುಮಾರ್ ಅವರನ್ನು ಕರೆಸಿ, ಇಂಥ ಸನ್ನಿವೇಶ ನಿರ್ಮಾಣ ಏಕಾಗುತ್ತಿದೆ, ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿವೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಈ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ತಹಸೀಲ್ದಾರ್ ಎಸ್.ಪಿ.ಕೂಡಲಗಿ, ಹತ್ತು ದಿನದೊಳಗೆ ಸಮಸ್ಯೆಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೂರುದಾರ ವಿಕ್ಟರ್ ವೇಗಸ್ ಪ್ರತಿಕ್ರಿಯಿಸಿ, ನನಗೆ ಎರಡು ತಿಂಗಳ ಅವಧಿಯಾದರೂ ಸರಿ ಕಡತ ನೀಡಿ ಎಂದರು.