ಅಪರಾದಿಗಳನ್ನು ಗಲ್ಲಿಗೇರಿಸುವುದು ಬಿಟ್ಟು ಮರಣದಂಡನೆಗೆ ಅನ್ಯ ಮಾರ್ಗ ಹುಡುಕಿ ➤ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ 22. ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸುವಿಕೆ ಅತಿ ಸೂಕ್ತ ಮತ್ತು ನೋವು ರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈ ಕುರಿತು ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ ವಿಧಾನ ಇದೇ ಆಗಿದೆಯೇ ಎಂಬ ಕುರಿತು ವಿವರಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

Also Read  100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ M.D.H ಮಾಲೀಕ ಧರ್ಮಪಾಲ್ ಇನ್ನಿಲ್ಲ

ಅತ್ಯಂತ ಕ್ರೂರವೆನಿಸುವ ನೇಣಿನ ಬದಲು, ಕಡಿಮೆ ನೋವುಕಾರವಾದ ಮಾರಣಾಂತಿಕ ಇಂಜೆಕ್ಷನ್‌, ಗುಂಡು ಹಾರಿಸುವುದು ಅಥವಾ ವಿದ್ಯುತ್‌ ಕುರ್ಚಿಯ ಮೇಲೆ ಕೂರಿಸುವ ಶಿಕ್ಷೆಗಳನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಂವಿಧಾನ ಪೀಠ ಆಲಿಸಿದೆ.

ನ್ಯಾಯಾಲಯವು ಅಂತಿಮವಾಗಿ ಪ್ರಕರಣವನ್ನು ಮೇ 2ಕ್ಕೆ ಮುಂದೂಡಿತು. ನೇಣು ಹಾಕುವ ವಿಧಾನ ಇತರೆ ವಿಧಾನಗಳ ಹೋಲಿಕೆಯಲ್ಲಿ ತೃಪ್ತಿಕರವೇ ಅಥವಾ ಮತ್ತೊಂದು ವಿಧಾನ ಅಳವಡಿಸಿಕೊಳ್ಳುವ ಮೂಲಕ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವುದೇ ಎಂಬುದನ್ನು ನಾವು ಪರಿಶೀಲಿಸಬೇಕಿದೆ ಎಂದು ಪೀಠ ಹೇಳಿತು.

error: Content is protected !!
Scroll to Top