(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 21. ಬಸ್ಸಿನಿಂದ ಎಸೆಯಲ್ಪಟ್ಟ ಪಿ.ಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದ ಪರಿಣಾಮ ಆತನ ಅಂಗಾಂಗವನ್ನು ದಾನ ಮಾಡಿ ಪೋಷಕರು ಸಮಾಜಕ್ಕೆ ಮಾದರಿಯಾಗಿದ್ದರು.ಇದೀಗ ಸಂತ್ರಸ್ತ ಕುಟುಂಬಕ್ಕೆ ಶಾಸಕ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 5 ಲಕ್ಷ ರೂಪಾಯಿ ಪರಿಹಾರ ನೀಡಲು ಕ್ರಮ ಕೈಗೊಂಡಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ, ಬೈದೆರೆಪಾಲು ನಿವಾಸಿಗಳಾದ ತ್ಯಾಗರಾಜ್ ಹಾಗೂ ಮಮತಾ ಕರ್ಕೇರ ದಂಪತಿಯ ಪ್ರಥಮ ಪುತ್ರ ಯಶ್ರಾಜ್(16), ಕಳೆದ ಸೆ. 07ರಂದು ಉಳ್ಳಾಲದಿಂದ ಸಿಟಿ ಬಸ್ ಮೂಲಕ ಮಂಗಳೂರಿನ ಕಾಲೇಜಿಗೆ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ತಲೆಗೆ ಗಂಭೀರ ಗಾಯಗೊಂಡ ಯಶರಾಜನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆ.13 ರಂದು ಯಶರಾಜ್ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ತಿಳಿಸಿದ್ದರು. ಪೋಷಕರ ನಿರ್ಧಾರದಂತೆ ಯಶರಾಜ್ ಅಂಗಾಂಗಗಳನ್ನ ದಾನ ಮಾಡಲಾಗಿತ್ತು. ಸಾವಿನಲ್ಲೂ ಸಾರ್ಥಕತೆ ಮೆರೆದ ಯಶರಾಜ್ ಮನೆಗೆ ಭೇಟಿ ನೀಡಿದ ಶಾಸಕ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಪರಿಹಾರ ಕೊಡಿಸುವುದಾಗಿ ಹೇಳಿದ್ದಲ್ಲದೇ ತನ್ನ ಆಪ್ತ ಸಹಾಯಕರ ಮೂಲಕವೇ ಎಲ್ಲಾ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದರು. ಇದೀಗ ಯಶರಾಜ್ ತಂದೆ ತ್ಯಾಗರಾಜ್ ಅವರ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 5 ಲಕ್ಷ ರೂ. ಜಮೆ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ತ್ಯಾಗರಾಜ್, ಮಗನನ್ನು ಕಳೆದು ನೊಂದಿರುವ ಕುಟುಂಬಕ್ಕೆ ಕೇಳದೇ ಬಂದು ಪರಿಹಾರ ಒದಗಿಸಿ ಕೊಟ್ಟ ಶಾಸಕ ಖಾದರ್ ಅವರ ಸರಳತೆ, ಕಾಳಜಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.